ಲಾಕ್ ಡೌನ್ ಹಗುರವಾಗಿ ಪರಿಗಣಿಸಿ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ – ಡಾ| ಪಿ ಎಸ್ ಹರ್ಷ
ಮಂಗಳೂರು : ಲಾಕ್ ಡೌನ್ ಹಗುರವಾಗಿ ಪರಿಗಣಿಸಿ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ| ಪಿ ಎಸ್ ಹರ್ಷ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ವೀಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದುಕೊರೋನಾ ವೈರಸ್ ಜಗತ್ತಿನ ಮಹಾಮಾರಿಯಾಗಿ ಪರಿಣಮಿಸಿದ್ದು ಈಗಾಗಲೇ ನೂರಾರು ದೇಶಗಳಲ್ಲಿ ಪಸರಿಸಿದೆ. ಇದರಿಂದಾಗಿ ಸಾಕಷ್ಟು ಸಾವು ನೋವುಗಳಿಗೆ ಕೂಡ ಕಾರಣವಾಗಿದೆ. ಇಂದಿನ ತನಕ ಜಗತ್ತಿನ 3.40 ಲಕ್ಷ ಜನರಿಗೆ ಈ ಸೋಂಕು ಹಬ್ಬಿದ್ದು, 14704 ಮಂದಿ ಸಾವನಪ್ಪಿದ್ದಾರೆ.
ಈಗಾಗಲೇ ಕೋರಾನ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡದಂತೆ ಭಾರತ ಸರಕಾರ, ರಾಜ್ಯ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಈಗಾಗಲೇ ಲಾಕ್ ಡೌನ್ ವಿಚಾರದಲ್ಲಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೆ ಗೊಳಿಸಿದ್ದು ಸಾರ್ವಜನಿಕರು ಲಾಕ್ ಡೌನ್ ಅನ್ನು ಯಾವುದೇ ರೀತಿಯಲ್ಲಿ ಅಸಡ್ಡೆ ಮಾಡುವಂತಿಲ್ಲ. ಇದು ಎಲ್ಲರ ಮೇಲೆ ಕಡ್ಡಾಯವಾಗಿ ಜಾರಿಯಾಗಿರುವ ಅಂಶವಾಗಿದೆ ಮತ್ತು ಇದನ್ನು ಯಾರೂ ಕೂಡ ಉಲ್ಲಂಘಿಸುವಂತಿಲ್ಲ. ಯಾರೇ ಆದರೂ ಇದನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಅಗತ್ಯ ಬಿದ್ದಲ್ಲಿ ದಸ್ತಗಿರಿ ಕೂಡ ಮಾಡಲು ಅವಕಾಶವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಜಿಲ್ಲೆಯ ಪ್ರತಿಯೊಬ್ಬ ಕುಟುಂಬದ ಆರೋಗ್ಯದ ಹಿತದೃಷ್ಠಿಯಿಂದ ಈ ಕಾನೂನನ್ನು ಜಾರಿಗೆ ತರಲಾಗಿದೆ ಅತೀ ತುರ್ತು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಬೇರೆ ಸಮಯಗಳಲ್ಲಿ ಮನೆಯಿಂದ ಹೊರಗೆ ಬಾರದಂತೆ ಅವರು ವಿನಂತಿಸಿದ್ದಾರೆ. ಎಲ್ಲಾ ಪ್ರಾರ್ಥನಾ ಸ್ಥಳಗಳೂ ಕೂಡ ತಮ್ಮ ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.