ಲಾಕ್ ಡೌನ್ ಹಿನ್ನಲೆ; ಸಾಮೂಹಿಕ ಪ್ರಾರ್ಥನೆ ತ್ಯಜಿಸಿ ಮನೆಯಲ್ಲಿಯೇ ಇದ್ದು ಪಾಮ್ ಸಂಡೆ ಆಚರಿಸಿ ಕ್ರೈಸ್ತರು
ಉಡುಪಿ : ಯೇಸು ಸ್ವಾಮಿ ಜೆರುಸಲೇಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ಭಾನುವಾರ (ಪಾಮ್ ಸಂಡೆ)ಯನ್ನು ಲಾಕ್ ಡೌನ್ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಆಚರಿಸಿದರು.
ಕೊರೋನಾ ವೈರಸ್ ಸೋಂಕು ಹರಡದಂತೆ ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾದ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಸರಕಾರದ ಆದೇಶದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಎಲ್ಲಾ ಕ್ರೈಸ್ತ ಭಾಂಧವರಿಗೆ ಆದೇಶ ನೀಡಿದ್ದಾರೆ. ಅದರಂತೆ ಪಾಮ್ ಸಂಡೆಯ ಪ್ರಯುಕ್ತ ಎಲ್ಲಾ ಚರ್ಚುಗಳಲ್ಲಿ ಆಯಾ ಚರ್ಚಿನ ಧರ್ಮಗುರುಗಳು ಮಾತ್ರ ಚರ್ಚಿನಲ್ಲಿ ಏಕಾಂಗಿಯಾಗಿ ಪಾಮ್ ಸಂಡೆಯ ಪ್ರಾರ್ಥನಾ ವಿಧಿಯನ್ನು ನೇರವೇರಸಿದರು. ಯಾವುದೇ ಚರ್ಚುಗಳನ್ನು ಭಕ್ತಾದಿಗಳಿಗೆ ತೆರೆಡಿಡದೆ ಮುಚ್ಚಲಾಗಿತ್ತು.
ಜಿಲ್ಲೆಯ ಆಯ್ದ ಚರ್ಚುಗಳಲ್ಲಿ ಪಾಮ್ ಸಂಡೆಯ ಪ್ರಾರ್ಥನಾ ವಿಧಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಿ ಮನೆಯಲ್ಲಿರುವ ಭಕ್ತರಿಗೆ ವೀಕ್ಷಿಸಲು ವ್ಯವಸ್ಥೆಗೊಳಿಸಲಾಗಿತ್ತು.
ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಯೇಸುಕ್ರಿಸ್ತರು ಜೆರುಸಲೇಂ ನಗರವನ್ನು ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ಯೇಸುವಿಗೆ ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಮೆರವಣಿಗೆಯಲ್ಲಿ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಲಾಕ್ ಡೌನ್ ಪ್ರಯುಕ್ತ ಎಲ್ಲಾ ಚರ್ಚುಗಳು ಭಕ್ತಾದಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು.
ಪವಿತ್ರ ಸಪ್ತಾಹವು ಕ್ರೈಸ್ತರಿಗೆ ಅತೀ ಮಹತ್ವದಾಗಿದ್ದು, ಗುರುವಾರ ಯೇಸುಕ್ರಿಸ್ತರು ಕೊನೆಯ ಭೋಜನ ಸ್ಮರಣೆ ಮಾಡಿದ್ದರೆ, ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ ಗುಡ್ ಫ್ರೈಡೆ ಆಚರಿಸಿ ಇಡೀ ದಿನವನ್ನು ಉಪವಾಸ, ಧ್ಯಾನದಲ್ಲಿ ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ. ಈ ಎಲ್ಲಾ ದಿನಗಳನ್ನು ಲಾಕ್ ಡೌನ್ ಹಿನ್ನಲೆಯಲ್ಲಿ ಭಕ್ತಾದಿಗಳು ಮನೆಯಲ್ಲಿಯೇ ಇದ್ದು ಪ್ರಾರ್ಥನೆ ಸಲ್ಲಿಸಲು ಧರ್ಮಾಧ್ಯಕ್ಷರು ಸೂಚನೆ ನೀಡಿದ್ದಾರೆ.
ಮೋದಿಯವರು ಕರೆನೀಡಿರುವ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಉಡುಪಿ ಧರ್ಮಪ್ರಾಂತ್ಯ ಕೂಡ ಬೆಂಬಲ ಸೂಚಿಸಿದ್ದು ಭಕ್ತಾದಿಗಳು ಮನೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಮೊಂಬತ್ತಿಗಳನ್ನು ಹಚ್ಚಿ ಭಾನುವಾರ ರಾತ್ರಿ ಪ್ರಾರ್ಥನೆ ಸಲ್ಲಿಸಲು ಸೂಚನೆ ನೀಡಿರುವ ಧರ್ಮಾಧ್ಯಕ್ಷರು ಅದೇ ಭಾನುವಾರ ಮಧ್ಯಾಹ್ನ ಧರ್ಮಪ್ರಾಂತ್ಯದಾದ್ಯಂತ ಕ್ರೈಸ್ತ ಭಕ್ತಾದಿಗಳು ಕೊರೋನಾ ವೈರಸ್ ನಿಂದ ವಿಶ್ವ ಹಾಗೂ ದೇಶವನ್ನು ರಕ್ಷಿಸುವಂತೆ ಕೋರಿ ಜಪಸರ ಪ್ರಾರ್ಥನೆಯನ್ನು ಏಕಕಾಲದಲ್ಲಿ ಧರ್ಮಪ್ರಾಂತ್ಯದಾದ್ಯಂತ ತಮ್ಮ ಮನೆಗಳಲ್ಲಿಯೇ ನೆರವೇರಿಸಲು ಕೋರಿದ್ದರು.