ಲಾಕ್ ಡೌನ್‌ನಲ್ಲಿ ಅಡ್ಮಿಶನ್: ಪೋಷಕರಿಂದ ಶುಲ್ಕ ಸಂಗ್ರಹ, 163 ಶಾಲೆಗೆ ಸರ್ಕಾರದ ನೋಟಿಸ್
ಬೆಂಗಳೂರು: ಲಾಕ್‌ಡೌನ್ ಸಮಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಡೆಸದಂತೆ ಹಾಗೂ ಪೋಷಕರಿಂದ ಶುಲ್ಕ ಸಂಗ್ರಹಿಸದಂತೆ ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿದ 163 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
10 ದಿನಗಳಿಂದ ನಗರದ ವಿವಿಧ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಬೆಂ. ದಕ್ಷಿಣ ಶೈಕ್ಷಣಿಕ ಜಿಲ್ಲೆಯಿಂದ 710 ದೂರುಗಳು ದಾಖಲಾಗಿದ್ದು, ಈ ಪೈಕಿ 116 ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಬೆಂ. ಉತ್ತರದಿಂದ 113 ದೂರುಗಳು ದಾಖಲಾಗಿದ್ದು, ಈ ಪೈಕಿ 45 ಶಾಲೆಗಳಿಗೆ ಹಾಗೂ ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ 6 ದೂರುಗಳು ದಾಖಲಾಗಿದ್ದು, ಎರಡು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಒಟ್ಟಾರೆ 829 ದೂರುಗಳ ಪೈಕಿ 163 ಶಾಲೆಗಳಿಗೆ ದೂರು ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಇಲ್ಲಿಯವರೆಗೂ 370 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.
ಶಾಲಾ ಆಡಳಿತ ಮಂಡಳಿಗಳು ಶುಲ್ಕ ವಸೂಲಿ, ಶುಲ್ಕ ಹೆಚ್ಚಳ ಮತ್ತು ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಡೆಯುವ ಪ್ರಕರಣಗಳು ಕಂಡು ಬಂದಲ್ಲಿ ದೂರು ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ದೂ- 080 2490025 ಅಥವಾ ಉಚಿತ ಕರೆ 1800 425 11035 ಕರೆ ಮಾಡಿ ದೂರು ನೀಡುವ ಅವಕಾಶ ಕಲ್ಪಿಸಿತ್ತು.
ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಮೂಲಕ ನೋಟಿಸ್ ನೀಡಲಾಗಿದ್ದು, ಲಿಖಿತವಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ. ಶಾಲಾ ಆಡಳಿತ ಮಂಡಳಿಗಳು ಪ್ರತಿಕ್ರಿಯಿಸಿದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ಶಾಲಾ ಮಾನ್ಯತೆಯನ್ನು ಕೂಡ ರದ್ದುಗೊಳಿಸುವ ಅಧಿಕಾರ ನೀಡಲಾಗಿದೆ ಎಂದು ತಿಳಿದು ಬಂದಿದೆ.