ಲಾಬಿ, ಒತ್ತಡಕ್ಕೆ ಮಣಿಯುವುದಿಲ್ಲ, ಆಗಸ್ಟ್ ವರೆಗೂ ಶಾಲೆಗಳನ್ನು ತೆರೆಯುವುದಿಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಉಡುಪಿ : ರಾಜ್ಯದಲ್ಲಿ ಬಹುತೇಕವಾಗಿ ಆಗಸ್ಟ್ ತಿಂಗಳ ಮಧ್ಯಭಾಗ ದಲ್ಲಿ ಶಾಲೆಗಳು ಪ್ರಾರಂಭಗೊಳ್ಳಬಹುದು. ಶಾಲೆಯನ್ನು ಹಂತಹಂತವಾಗಿ ಪ್ರಾರಂಭಿಸುವ ಇರಾದೆ ಸರಕಾರಕ್ಕಿದೆ. ಪ್ರಾರಂಭಕ್ಕೆ ಮುನ್ನ ಸಂಬಂಧಿಸಿದ ಎಲ್ಲರೊಂದಿಗೆ ಸಮಾಲೋಚಿಸಿ, ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಎಸೆಸೆಲ್ಸಿ ಪರೀಕ್ಷೆ ಪೂರ್ವಸಿದ್ಧತೆ ಕುರಿತಂತೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜಿಪಂ ಸಿಇಓ, ಶಿಕ್ಷಣ ಇಲಾಖೆಯ ಡಿಡಿಪಿಐ, ಬಿಇಓಗಳೊಂ ದಿಗೆ ನಡೆಸಿದ ಸಮಾಲೋಚನಾ ಸಭೆಯ ಬಳಿಕ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತಿದ್ದರು.
ನನ್ನ ಗಮನ ಏನಿದ್ದರೂ ಸರ್ಕಾರಿ ಶಾಲೆಗಳ ಸಬಲೀಕರಣ ಮಾಡುವುದು. ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವಂತೆ ಮಾಡುವುದೇ ನನ್ನ ಗುರಿ ಯಾವುದೇ ಲಾಬಿ, ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಶಾಲೆಯನ್ನು ಆರಂಭಿಸುವ ಬಗ್ಗೆ ನಾಳೆಯಿಂದ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಲಾಗುವುದು. ಪೋಷಕರಿಗೆ ಮೂರು ಪ್ರಶ್ನೆಗಳನ್ನು ಕೇಳಲಾಗುವುದು. ಯಾವಾಗ ಶಾಲೆ ಪ್ರಾರಂಭಿಸಬೇಕು/ ಹೇಗೆ ನಡೆಸಬೇಕು?
ಪೋಷಕರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳುತ್ತೇವೆ. ನಾಳೆಯಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗುವುದು ಎಂದರು.
ಕೋವಿಡ್-19 ಕಾರಣದಿಂದ ಈ ವರ್ಷದ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವುದು ವಿಳಂಬವಾಗಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ಪ್ರಸಕ್ತ ವರ್ಷದ ಶಾಲಾ ಪಠ್ಯವನ್ನು ಕಡಿಮೆ ಮಾಡಲು ಚಿಂತನೆ ಇದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಶಾಲಾ ಶೈಕ್ಷಣಿಕ ಅವಧಿ ಕಡಿಮೆಯಾಗಲಿದ್ದು, ಇದಕ್ಕಾಗಿ ಶಾಲಾ ಪಠ್ಯವನ್ನು ಕಡಿಮೆಗೊಳಿಸುವ ಕುರಿತಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳ ಮುಂದಿನ ತರಗತಿಗೆ ಅಗತ್ಯವಿರುವ ಪಠ್ಯದ ಕೊರತೆಯಾಗದಂತೆ , ಸೀಮಿತ ಅವಧಿಯೊಳಗೆ ಅತ್ಯಗತ್ಯ ಇರುವ ಪಠ್ಯ ಮಾತ್ರ ಒಳಗೊಳ್ಳುವಂತೆ ಪಠ್ಯವನ್ನು ಕಡಿಮೆ ಮಾಡಲು ಚಿಂತನೆ ಇದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಕೋವಿಡ್-19 ಅವಧಿಯಲ್ಲಿ ರಾಜ್ಯದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಚಂದನ ವಾಹಿನಿಯ ಮೂಲಕ ಪರೀಕ್ಷೆಗಾಗಿ ಪಠ್ಯದ ಪುರ್ನ ಮನನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ರಾಜ್ಯದಲ್ಲಿ ಶಿಕ್ಷಣ ಇಲಾಖೆಗೆ ಸಂಬAದಿಸಿದAತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಪತ್ಯೇಕ ಟಿವಿ ಚಾನೆಲ್ ಆರಂಭಿಸುವ ಚಿಂತನೆ ಇದ್ದು, ಈ ಕುರಿತಂತೆ ಕೇಂದ್ರ ಸಚಿವ ಅಜಿತ್ ಜಾವೆಡ್ಕರ್ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.
ಕೋವಿಡ್ ಅವಧಿಯಲ್ಲಿ ರಾಜ್ಯದ ಶಿಕ್ಷಕರು , ಕಾನನ ಶಾಲೆ, ವಠಾರ ಶಾಲೆ, ಓಣಿ ಶಾಲೆ, ಓದಿನ ಮನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪಾಠ ಮಾಡಿದ್ದು, ಇದು ಶಿಕ್ಷಕರಲ್ಲಿನ ಸೃಜನ ಶೀಲತೆ, ಕತೃತ್ವ ಶಕ್ತಿ ಗುಣಗಳನ್ನು ತೋರಿಸುತತದೆ ಈ ಕುರಿತಂತೆ ಎಲ್ಲಾ ಶಿಕ್ಷಕರಿಗೆ ಧನ್ಯವಾದ ತಿಳಿಸುವುದಾಗಿ ಸಚಿವರು ಹೇಳಿದರು.
ರಾಜ್ಯದಲ್ಲಿ ಎಸ್.ಎಎಸ್.ಎಲ್.ಸಿ ಪರೀಕ್ಷೆ ನಡೆಸಲು ಸಂಬAದಿಸಿದAತೆ , ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳ ಕುರಿತು ಹೈಕೋರ್ಟ್ ಗೆ ಸಲ್ಲಿಸಿರುವ ವರದಿಯಂತೆ, ಥರ್ಮಲ್ ಸ್ಕಾö್ಯನರ್, ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷಾ ವಿಧಾನಗಳಿಗೆ ಯಾವುದೇ ಕುಂದು ಬಾರದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಿದೆ, ಪರೀಕ್ಷೆ ಕುರಿತಂತೆ ಮಕ್ಕಳಿಗೆ ಹಿತಕರ ವಾತಾವರಣ ನಿರ್ಮಿಸಿ, ಯಾವುದೇ ಆತಂಕಕ್ಕೆ ಒಳಗಾಗದಂತೆ ಪರೀಕ್ಷೆ ಬರೆಯಲು ಶಿಕ್ಷಕರು ಪ್ರೋತ್ಸಾಹ ತುಂಬುವAತೆ ಸಚಿವ ಸುರೇಶ್ ಕುಮಾರ್ ಹೇಳಿದರು.
ರಾಜ್ಯದಲ್ಲಿ ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ನಡೆಸಲಾಗುವುದು, ಪ್ರಸಕ್ತ ವರ್ಷದಲ್ಲಿ ಶಾಲಾ ಮಕ್ಕಳ ಹಾಜರಾತಿ ಗಣನೆಗೆ ತೆಗೆದುಕೊಂಡು ಶಾಲೆಗಳಲ್ಲಿನ ಹೆಚ್ವುವರಿ ಶಿಕ್ಷಕರ ವರ್ಗಾವಣೆ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು.
ಕೋವಿಡ್-19ರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ. ಈ ವಿಷಯದಲ್ಲಿ ನಾವು ತುಂಬಾ ಮುಂದೆ ಬಂದಿದ್ದೇವೆ. ತೆಲಂಗಾಣ, ತಮಿಳುನಾಡು ಪರೀಕ್ಷೆ ರದ್ದು ಮಾಡಿವೆ ಎಂದು ನಾವು ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ. ನಾವು ಅವರನ್ನು ಫಾಲೋ ಮಾಡುವುದಿಲ್ಲ. ಮಕ್ಕಳ ಹಿತವನ್ನು ಗಮನದಲ್ಲಿರಿಸಿಕೊಂಡು ಎಚ್ಚರಿಕೆ ಕ್ರಮದೊಂದಿಗೆ ಪರೀಕ್ಷೆ ನಡೆಸುತ್ತೇವೆ. ಅವರು ನಮ್ಮನ್ನು ಫಾಲೋ ಮಾಡಬೇಕು ಎಂದರು.
ನಾವು ಎಸೆಸೆಲ್ಸಿ ಪರೀಕ್ಷೆಯನ್ನು ರದ್ದುಪಡಿಸದೇ, ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ಆತ್ಮವಿಶ್ವಾಸ ಎರಡಕ್ಕೂ ಗಮನವಿಟ್ಟು ಅಗತ್ಯ ಕ್ರಮ ಗಳೊಂದಿಗೆ ಪರೀಕ್ಷೆಯನ್ನು ನಡೆಸುತ್ತೇವೆ. ಕೇಂದ್ರ ಗೃಹ ಇಲಾಖೆ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಜೊತೆಗೆ ಕೇಂದ್ರ ಸಿಬಿಎಸ್ಸಿ ಪರೀಕ್ಷೆಯ ದಿನಾಂಕವನ್ನೂ ಪ್ರಕಟಿಸಿದೆ. ಕರ್ನಾಟಕ ಹೈಕೋಟ್ ಸಹ ಪರೀಕ್ಷೆ ನಡೆಸಲು ಹಸಿರು ನಿಶಾನಿ ತೋರಿಸಿದ್ದಲ್ಲದೇ, ಕೆಲವು ಸೂಚನೆಗಳನ್ನೂ ನೀಡಿದೆ ಎಂದವರು ತಿಳಿಸಿದರು.
ಪೂರಕ ಪರೀಕ್ಷೆಯಲ್ಲಿ ಅವಕಾಶ: ಕೋವಿಡ್ನ ಬದಲಾದ ಸನ್ನಿವೇಶದಲ್ಲಿ ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ಬರೆಯುವ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಪ್ರತಿ ಕೊಠಡಿಯಲ್ಲಿ ಇನ್ನು 18ರಿಂದ ಗರಿಷ್ಠ 20 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಮಕ್ಕಳ ನಡುವೆ ಅಥವಾ ಡೆಸ್ಕ್ಗಳ ನಡುವೆ 3.5ಅಡಿ ಅಂತರವಿರುತ್ತದೆ. ಪ್ರತಿ ಮಗು ಮಾಸ್ಕ್ ಹಾಕಿ ಬರೆಯುವ ವ್ಯವಸ್ಥೆ. ಎಲ್ಲಾ ಮಕ್ಕಳಿಗೆ ಕನಿಷ್ಠ 2 ಮಾಸ್ಕ್ಗಳನ್ನು ನೀಡುತ್ತೇವೆ. ಎಲ್ಲಾ ಕೇಂದ್ರಗಳನ್ನು ಸೆನಟೈಸ್ ಮಾಡಲಾಗುವುದು. ಪ್ರತಿ ಮಗುವಿನ ಆರೋಗ್ಯ ತಪಾಸಣೆಗೆ ವ್ಯವಸ್ಥೆ, ಇದಕ್ಕಾಗಿ ಪ್ರತಿ 200 ಮಗುವಿಗೊಂದು ಥರ್ಮಲ್ ಸ್ಕಾನರ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರತಿ ಕೊಠಡಿ ಸೆನಟೈಸ್ ಮಾಡಿ, ಮೇಲ್ವಿಚಾರಕರು ಸಹ ಮಾಸ್ಕ್ ಹಾಕಿದ್ದು, ಆರೋಗ್ಯ ತಪಾಸಣೆಗೊಳಗಾಗಬೇಕು. ಅವರ ಕೈಗೆ ಗ್ಲೌಸ್ ಕಡ್ಡಾಯ. ಕುಡಿಯುವ ಬಿಸಿ ನೀರನ್ನು ಪ್ರತಿ ಮಗು ಮನೆಯಿಂದ ತರುವಂತೆ ಸೂಚನೆ ನೀಡಲಾಗುವುದು. ಅದೇ ರೀತಿ ನ್ಯಾಯಾಲಯದ ಆದೇಶದಂತೆ ಅಗತ್ಯವಿರುವ ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಮಕ್ಕಳ ಪಟ್ಟಿ ಹಾಗೂ ರೂಟ್ ಮ್ಯಾಪ್ ತಯಾರಿಸಿ, ಸಾರಿಗೆ ಇಲಾಖೆ ಅಧಿಕಾರಿಗಳ ಮೂಲಕ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಪೂರಕ ಪರೀಕ್ಷೆಯಲ್ಲಿ ಅವಕಾಶ: ಕಂಟೈನ್ಮೆಂಟ್ ವಲಯದಲ್ಲಿರುವ ಮಕ್ಕಳಿಗೆ ಜೂ.25ರಿಂದ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಮುಂದಿನ ಪೂರಕ ಪರೀಕ್ಷೆಯಲ್ಲಿ ಫ್ರೆಶ್ ಅಭ್ಯರ್ಥಿಯಾಗಿಯೇ ಬರೆಯಲು ಅವಕಾಶ ಒದಗಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಖಾಸಗಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು, ಜಿಲ್ಲಾ ಕೇಂದ್ರಕ್ಕೆ ಆಗಮಿಸುವವರಿಗೆ, ಜಿಲ್ಲೆಯಲ್ಲಿ ಉಳಿಯಲು ಹಾಸ್ಟಲ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಾಸಕರಾದ ರಘುಪತಿಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ,ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ದ.ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ಸೆಲ್ವಮಣಿ, ಉ.ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ರೋಶನ್ ಉಡುಪಿ ಎಸ್ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.