ಲಾರಿ ಚಾಲಕ, ಕಾರ್ಮಿಕರ ವಿರುದ್ಧ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಡೆ ಖಂಡನೀಯ : ಮಹೇಶ್ ಠಾಕೂರ್
ಉಡುಪಿ: ನ.24ರಂದು ಮಣಿಪಾಲದ ರಜತಾದ್ರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಜಿ ಸಚಿವ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ರವರು, ಕಟ್ಟಡ ಸಾಮಗ್ರಿ ಸಾಗಾಟದ ಲಾರಿ ಮಾಲಕರು, ಚಾಲಕರು ಮತ್ತು ಕಾರ್ಮಿಕರು ನಡೆಸಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ನೋಟಿಸ್ ನೀಡಿರುವ ಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರ ಬಳಿ ಪ್ರಶ್ನಿಸಿರುವುದು ನ್ಯಾಯಸಮ್ಮತವಾಗಿದೆ. ಆದರೆ ಶಾಸಕರ ಮೇಲಿನ ದ್ವೇಷದಿಂದ ಈ ವಿಚಾರವನ್ನು ರಾಜಕೀಯಗೊಳಿಸಿ ಹೊಟ್ಟೆಪಾಡಿಗೆ ದುಡಿಯುವ ಲಾರಿ ಚಾಲಕ, ಕಾರ್ಮಿಕರ ವಿರುದ್ಧ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮನಸ್ಥಿತಿ ಖಂಡನೀಯ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದ್ದಾರೆ.
ಈ ಹಿಂದೆ ನಡೆದ ಭಾರತ್ ಬಂದ್ ಸಂದರ್ಭದಲ್ಲಿ ಕಾನೂನನ್ನು ಉಲ್ಲಂಘಿಸಿ ಉಡುಪಿಯಲ್ಲಿ ಬಲವಂತದ ಬಂದ್ ಮಾಡಲು ಪ್ರಯತ್ನಿಸಿ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಲಾಟಿ ಚಾರ್ಜ್ ರುಚಿ ಅನುಭವಿಸಿರುವ ರಮೇಶ್ ಕಾಂಚನ್ ರವರಿಗೆ ಕ್ರಿಯಾಶೀಲ ಶಾಸಕ, ಮಾಜಿ ಸಚಿವ ವಿ.ಸುನಿಲ್ ಕುಮಾರ್ ರವರು ಕೆಡಿಪಿ ಸಭೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಪಾಠ ಮಾಡಲು ಯಾವುದೇ ನೈತಿಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಮಾಲಕ, ಚಾಲಕ, ಕಾರ್ಮಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೈಗೊಂಡ ಕ್ರಮವನ್ನು ಖಂಡಿಸಿ, ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಲಾರಿಗಳನ್ನು ಸಾಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದ ಬಗ್ಗೆ ಪೋಲಿಸ್ ಇಲಾಖೆ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ಕಾರ್ಕಳ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಸ್ಪಷ್ಟತೆ ಕೇಳಿರುವುದು ತಪ್ಪು ಎಂದು ಬೊಬ್ಬೆ ಹೊಡೆಯುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬಾಲಿಷ ವರ್ತನೆ ಹಾಸ್ಯಾಸ್ಪದವಾಗಿದೆ.
ಸಂವಿಧಾನಾತ್ಮಕವಾಗಿ ಜನಪರ ಪ್ರತಿಭಟನೆ ನಡೆಸಿದರೆ ಪೋಲಿಸ್ ಇಲಾಖೆ ನೋಟಿಸ್ ನೀಡುವುದಾದರೆ ಯಾವ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕು ಎಂಬ ಬಗ್ಗೆ ಮಾರ್ಗಸೂಚಿಯನ್ನು ನೀಡುವಂತೆ ಶಾಸಕರು ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಆಗ್ರಹಿಸಿರುವುದು ನ್ಯಾಯ ಸಮ್ಮತವಾಗಿದ್ದು, ನೊಟೀಸ್ ಪಡೆದವರು ಜಿಲ್ಲಾ ನ್ಯಾಯಾಲಯ, ಹೈಕೋರ್ಟಿಗೆ ಹೋಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉಡಾಫೆಯ ಮಾತನ್ನಾಡಿರುವುದು ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಪೊಲೀಸ್ ರಾಜ್ಯವನ್ನಾಗಿಸಲು ಹೊರಟಿದೆ ಎಂಬುದನ್ನು ಸಾಬೀತುಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಈ ಎಲ್ಲಾ ವಿದ್ಯಮಾನಗಳನ್ನು ಮೂಕ ಪ್ರೇಕ್ಷಕರಾಗಿ ವೀಕ್ಷಿಸಿರುವುದು ಅನುಮಾನಕ್ಕೆಡೆಮಾಡಿದೆ.
ಸಂಕಷ್ಟದಲ್ಲಿದ್ದ ಕಾರ್ಮಿಕರು ತಮ್ಮ ಅಳಿವು ಉಳಿವಿಗಾಗಿ ನಡೆಸಿದ ಹೋರಾಟದ ಪರ ವಹಿಸದೆ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಡೆ ಖಂಡನೀಯ. ರಾಜ್ಯ ಕಾಂಗ್ರೆಸ್ ಸರಕಾರದ ಶಾಸಕರೇ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕೆಲವು ಸಚಿವರಂತೂ ಯಾವ ರೀತಿ ಎಲ್ಲೆ ಮೀರಿ ದುರಹಂಕಾರದಿಂದ ಮೆರೆಯುತ್ತಿದ್ದಾರೆ ಎಂಬುದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಗ್ಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆತ್ಮಾವಲೋಕನ ನಡೆಸಿ ಅಂತವರಿಗೆ ಮೊದಲು ಬುದ್ಧಿವಾದ ಹೇಳುವ ಸತ್ಕಾರ್ಯ ಮಾಡುವುದು ಉತ್ತಮ.
ನಕಲಿ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೇರಿದ ಕಾಂಗ್ರೆಸ್, ಗ್ಯಾರಂಟಿಗಳ ವೈಫಲ್ಯ, ಬರ ನಿರ್ವಹಣೆಯಲ್ಲಿ ವೈಫಲ್ಯ, ರೈತರ ಆತ್ಮಹತ್ಯೆ, ವಿದ್ಯುತ್ ಕಣ್ಣು ಮುಚ್ಚಾಲೆ, ಆಂತರಿಕ ಕಚ್ಚಾಟ, ಕಮಿಷನ್ ದಂಧೆಯಲ್ಲಿ ಮುಳುಗಿ ರಾಜ್ಯದ ಹಿತವನ್ನು ಬಲಿಕೊಟ್ಟಿದೆ. ಅಸಹಾಯಕರು, ಬಡ ಜನತೆ ಹಾಗೂ ಕಾರ್ಮಿಕರ ಪರ ಕಾಳಜಿ ಇಲ್ಲದ ರಾಜ್ಯ ಕಾಂಗ್ರೆಸ್ ಸರಕಾರದ ದುರಹಂಕಾರದ ವರ್ತನೆಗೆ ರಾಜ್ಯದ ಜನತೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.