ಲಿಂಗತ್ವ ಅಲ್ಪಸಂಖ್ಯಾತರಿಗೆ ಪೌಲ್ಟ್ರಿ ಉದ್ಯಮ ತರಬೇತಿ ಅವಕಾಶ ನೀಡಿದ ಕೃಷಿ ವಿಜ್ಞಾನ ಕೇಂದ್ರ
ಮಂಗಳೂರು: ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಪೌಲ್ಟ್ರಿ ಉದ್ಯಮದ ಬಗ್ಗೆ ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ|ಶಿವಕುಮಾರ್ ಮದಗ ಹೇಳಿದ್ದಾರೆ.
ಅವರು ಶನಿವಾರ ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಆಯೋಜಿಸಿದ 31 ನೇ ವಾರದ ಕೃಷಿ ವಿಜ್ಞಾನ ತರಬೇತಿಯ ಕಾರ್ಯಕ್ರಮದಲ್ಲಿ ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಿಂದ ತುಳಿತಕ್ಕೊಳಗಾದವರಾಗಿದ್ದು ಅವರ ಜೀವನ ನೀರ್ವಹಣೆಗೆ ತೊಂದರೆಯನ್ನು ಅನುಭವಿಸುತ್ತಿರುವುದು ಸರ್ವರಿಗೂ ತಿಳಿದ ವಿಚಾರವಾಗಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಯೋಜಿಸಿದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ವೇಳೆ ಅವರುಗಳ ಸಮಸ್ಯೆಯನ್ನು ಕೇಳಿ ನಿಜಕ್ಕೂ ಆಘಾತಗೊಂಡಿದ್ದು, ನಮ್ಮ ಇಲಾಖೆಯ ವತಿಯಿಂದ ಸಹಕಾರ ನೀಡಲು ನಿರ್ಧರಿಸಲಾಗಿದೆ ಎಂದರು.
ಪ್ರತಯೊಬ್ಬರು ನಾವು ಲಿಂಗತ್ವ ಅಲ್ಪಸಂಖ್ಯಾತರು ಎಂಬ ಭೇದವನ್ನು ಮಾಡದೇ ಪ್ರತಿಯೊಬ್ಬರನ್ನು ಗೌರವಿಸುವ ಕೆಲಸವನ್ನು ಮಾಡಬೇಕಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಾಗಿ ಹುಟ್ಟಿರುವುದು ಅವರ ತಪ್ಪಲ್ಲ ಅವರೂ ಕೂಡ ನಮ್ಮಂತೆಯೇ ಮನುಷ್ಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕಾಗಿದೆ. ಸೋಮವಾರದಿಂದ 6 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಪೌಲ್ಟ್ರೀ ಉದ್ಯಮದ ತರಬೇತಿಯ ಸಲುವಾಗಿ ಆಹ್ವಾನಿಸಿದ್ದು ಇದರಿಂದ ಅವರೂ ಕೂಡ ಸ್ವಾವಲಂಬಿಗಳಾಗಲು ನಮ್ಮಿಂದ ಆಗುವ ಪ್ರಯತ್ನವನ್ನು ಮಾಡಲಾಗುವುದು ಎಂದರು.
ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕಿ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ವಾಯ್ಲೆಟ್ ಪಿರೇರಾ ಅವರು ಟ್ರಸ್ಟ್ ಆರಂಭಿಸಿದ ಉದ್ದೇಶ ಹಾಗೂ ನಡೆದು ಬಂದ ಹಾದಿಯನ್ನು ವಿವರಿಸಿದರು.
ಟ್ರಸ್ಟಿನ ಕಾರ್ಯದರ್ಶಿ ಸಂಜನಾ ಅವರು ತಾವು ಟ್ರಸ್ಟಿನ ಸದಸ್ಯರಾಗುವ ಮುನ್ನ ಅನುಭವಿಸಿದ ನೋವು ಹಾಗೂ ಸದಸ್ಯರಾದ ಬಳಿಕ ಟ್ರಸ್ಟ್ ಮೂಲಕ ಪಡೆದ ಗೌರವ ಹಾಗೂ ಸಹಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ರು.