ಲಿಂಗಪತ್ತೆ ನಿಷೇಧ ಪರಿಣಾಮಕಾರಿ ಅನುಷ್ಠಾನ ಮುಖ್ಯ- ಜಿಲ್ಲಾಧಿಕಾರಿ ಟಿ ವೆಂಕಟೇಶ್
ಉಡುಪಿ: ಗರ್ಭಧಾರಣ ಮತ್ತು ಪ್ರಸವಪೂರ್ವ ಪತ್ತೆಗೆ ಜಿಲ್ಲೆಯಲ್ಲಿ ತಪಾಸಣಾ ತಂಡವನ್ನು ರಚಿಸಲಾಗಿದ್ದು, ತಂಡ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಟಿ ವೆಂಕಟೇಶ್ ಹೇಳಿದರು.
ಮಣಿಪಾಲದ ಶಿರಡಿ ಸಾಯಿಬಾಬ ಆಸ್ಪತ್ರೆಯ ಮೂರನೇ ಮಹಡಿಯ ಸಭಾಂಗಣದಲ್ಲಿ ನಡೆದ ಗರ್ಭಧಾರಣ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಲಿಂಗ ಆಯ್ಕೆಯ ನಿಷೇಧ ಅಧಿನಿಯಮದಡಿ ತಮ್ಮ ಅವಧಿಯಲ್ಲಿ ಈವರೆಗೆ ಯಾವುದೇ ದೂರು ದಾಖಲಾಗದೇ ಇದ್ದರೂ, ಈ ಸಂಬಂಧದ ಕಾನೂನನ್ನು ಅನುಷ್ಟಾನಕ್ಕೆ ತರುವಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ನೊಂದಾಯಿತ ಸಂಸ್ಥೆಗಳು ತಮ್ಮ ಕಾರ್ಯ ವ್ಯಾಪ್ತಿಯಡಿ ಕರ್ತವ್ಯ ನಿರ್ವಹಿಸಿದರೆ ದೂರುಗಳಿಗೆ ಅವಕಾಶವಿರುವುದಿಲ್ಲ ಎಂದು ಅವರು ಹೇಳಿದರು.
ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಉಪನಿರ್ದೇಶಕರಾದ ಡಾ.ರಜನಿಯವರು ಗರ್ಭಧಾರಣ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ ಸಮಗ್ರ ಮಾಹಿತಿಯನ್ನು ಉಪಸ್ಥಿತರಿದ್ದ ಸಂಸ್ಥೆಯ ಪ್ರತಿನಿಧಿಗಳಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ನೀಡಿದರು. ಹಾಗೂ ಸಂವಾದದಲ್ಲಿ ಈ ಸಂಬಂಧ ಸಂಸ್ಥೆಯವರಿಗೆ ಇರುವ ಹಲವು ಸಂಶಯಗಳಿಗೆ ಉತ್ತರವನ್ನು ನೀಡಿದರು.
ಸುಮಾರು 113 ಸಂಸ್ಥೆಯ ವೈದ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಡಾ.ಮುರಳೀಧರ್ ಪೈ ಸ್ವಾಗತಿಸಿದರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಅಖಿಲಾ ಮಾಹಿತಿ ನೀಡಿದರು.