ಲಿಂಗಾನುಪಾತ ಕುರಿತು ಅರಿವು ಅಗತ್ಯ – ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್
ಮಂಗಳೂರು: ಲಿಂಗಾನುಪಾತದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಗಳು ನಡೆಯಬೇಕು. ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ ಸಲಹೆಗಳನ್ನು ಸಮಾಜಕ್ಕೆ ನೀಡಬೇಕು ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.
ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಗರ್ಭಪೂರ್ವ ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ 1994ಯಡಿಯಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿನ ವ್ಯತ್ಯಾಸ ಕುರಿತಂತೆ ಅಂತರ್ ರಾಜ್ಯ, ಅಂತರ್ ಜಿಲ್ಲಾ ಮಟ್ಟದ ಸಭೆ ಹಾಗೂ ಕಾರ್ಯಗಾರವನ್ನು ಉದ್ಘಾಟಿಸಿ ಮಾತಾಡಿದ ಅವರು ಗಂಡು ಮಗು ಬೇಕೆಂಬ ಹಂಬಲ, ಅಸುಕ್ಷಿತ ಗರ್ಭಪಾತ ಇಂತಹ ಕಾರಣಗಳು ಸಾಮಾಜಿಕ ಪಿಡುಗಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಗಾರ ಸಮಾಜದ ಬದಲಾವಣೆಗೆ ಸ್ಪೂರ್ತಿಯಾಗಬೇಕು. ಜನರ ಆಗು-ಹೋಗುಗಳನ್ನು ಹತ್ತಿರದಿಂದ ಕಂಡಿರುವ ವೈದ್ಯರುಗಳು ಲಿಂಗಾನುಪಾತದ ಕುರಿತು ಸಾರ್ವಜನಿಕರಿಗೆ ಮನದಟ್ಟು ಮಾಡಬೇಕು. ಕಾರ್ಯಗಾರದಲ್ಲಿ ಅರ್ಥಪೂರ್ಣ ಚರ್ಚೆಗಳನ್ನು ನಡೆಸಿ, ಸಲಹೆ ಸೂಚನೆಗಳನ್ನು ನೀಡಿ ನಂತರ ಉತ್ತಮ ಮಾಹಿತಿಗಳನ್ನು ಸಮಾಜಕ್ಕೆ ನೀಡಿ, ಕ್ರಿಯಾ ಯೋಜನೆಯನ್ನು ರೂಪಿಸುವಲ್ಲಿ ಇಂದಿನ ಚರ್ಚೆಗಳು ಯಶಸ್ವಿಯಾಗಬೇಕು ಎಂದು ಸಲಹೆ ನೀಡಿದರು.
ದ.ಕ ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್ ಪ್ರಾಸ್ತಾವಿಕವಾಗಿ ಮಾತಾನಾಡಿ ಜಿಲ್ಲೆಯಲ್ಲಿನ ಲಿಂಗಾನುಪಾತದ ವ್ಯತ್ಯಾಸದ ಬಗ್ಗೆ ಮಾಹಿತಿ ನೀಡಿದರು. ¥ ಸಾಮಾಜಿಕ ಸಾಮರಸ್ಯ ಹಾಗೂ ಆರೋಗ್ಯವಂತ ಸಮಾಜಕ್ಕಾಗಿ ಲಿಂಗಾನುಪಾತದ ವ್ಯತ್ಯಾಸದ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಬೇಕು ಎಂದು ಹೇಳಿದರು.
ಲಿಂಗಾನುಪಾತದಲ್ಲಿ ವ್ಯತ್ಯಾಸ, ಕುಸಿತವನ್ನು ತಡೆಗಟ್ಟುವಲ್ಲಿ ನಗರದ ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ಜಿಲ್ಲಾ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಜಿಲ್ಲೆಯಲ್ಲಿ 8 ಸರಕಾರಿ ಹಾಗೂ 154 ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಮಾಹಿತಿಯನ್ನು ಪಡೆಯುವ ಮತ್ತು ಗರ್ಭಪೂರ್ವ ಪ್ರಸವಪೂರ್ವ ಲಿಂಗಪತ್ತೆ ನಿಷೇಧ ಕಾಯ್ದೆ 1994 ರ ಬಗ್ಗೆ ಜಾಗೃತಿ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ, ಪ್ರಭಾರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧ್ಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ್ ಪೂಜಾರಿ, ಜಿಲ್ಲಾ ಸಲಹಾಸಮಿತಿ ಅಧ್ಯಕ್ಕೆ ಡಾ. ರಶ್ಮಿ, ಸುರತ್ಕಲ್ ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ರಾಮಚಂದ್ರ ಬಾಯಾರಿ, ದ.ಕ.ಜಿಲ್ಲೆ ಎಫ್.ಒ.ಜಿ.ಎಸ್.ಐ ಅಧ್ಯಕ್ಷೆ ಡಾ. ವತ್ಸಲಾ ಕಾಮತ್, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರು ಡಾ. ರಾಜೇಶ್ವರಿ ದೇವಿ ಮತ್ತಿತರು ಉಪಸ್ಥಿತರಿದ್ದರು.