ಲೇಖಾನುದಾನಕ್ಕೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನೀರಸ : ಕ್ಯಾ. ಗಣೇಶ್ ಕಾರ್ಣಿಕ್
ಮಂಗಳೂರು: ವೇತನ ಆಯೋಗದ ಅವಧಿಯನ್ನು ಎಪ್ರಿಲ್ 30 ರವರೆಗೆ ವಿಸ್ತರಿಸಿ ವಿಳಂಬ ನೀತಿಯನ್ನು ಅನುಸರಿಸಿರುವುದರ ಹಿಂದೆ ವೇತನ ಆಯೋಗದ ವರದಿಯ ಅನುಷ್ಠಾನವನ್ನು ಮುಂದೆ ಬರುವ ಹೊಸ ಸರ್ಕಾರಕ್ಕೆ ಹಸ್ತಾಂತರಿಸುವ ಮೂಲಕ ತಾವು ಕೈಚೆಲ್ಲಿ ಸರ್ಕಾರಿ ನೌಕರರ ಆಶೆ ಆಕಾಂಕ್ಷೆಗಳಿಗೆ ಸಿದ್ದರಾಮಯ್ಯ ತಣ್ಣೀರೆರಚಿದ್ದಾರೆ. ಎನ್ಪಿಎಸ್ ಬಗ್ಗೆ ಚಕಾರವೆತ್ತದೆ ಎನ್ಪಿಎಸ್ ನೌಕರರಿಗೂ ನಿರಾಶೆ ಮೂಡಿಸಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಶಿಕ್ಷಣ ಮತ್ತು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿಸುವುದರೊಂದಿಗೆ ಶಿಕ್ಷಕರ ಕಾಲ್ಪನಿಕ ವೇತನ ಸಮಸ್ಯೆ, 1995ರ ನಂತರ ಆರಂಭವಾದ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನುದಾನ ವಿಸ್ತರಣೆ, 1987-95ರ ನಡುವೆ ಪ್ರಾರಂಭವಾದ ಪದವಿ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ವೇತನ ತಾರತಮ್ಯದ ನಿವಾರಣೆಯ ಕುರಿತು ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಶಿಕ್ಷಕ ಹಾಗೂ ಉಪನ್ಯಾಸಕ ಸಮುದಾಯವನ್ನು ನಿರ್ಲಕ್ಷಿಸುವ ಮೂಲಕ ಉಪನ್ಯಾಸಕ ಹಾಗೂ ಶಿಕ್ಷಕ ಸಮುದಾಯಕ್ಕೆ ಈ ಬಜೆಟ್ ನಿರಾಶೆ ಮೂಡಿಸಿದೆ.
ರೂ. 2,42,000 ಕೋಟಿ ರೂಪಾಯಿಗಳ ಸಾಲದ ಹೊರೆಯ ಮೇಲೆ ಮತ್ತೆ 40,000 ಕೋಟಿ ರೂಪಾಯಿ ಹೊಸ ಸಾಲದ ಮೂಲಕ ರಾಜ್ಯದ ಪ್ರಜೆಗಳಿಗೆ “ಸಾಲದ” ಭಾಗ್ಯ ನೀಡಿರುವ ಸಿದ್ದರಾಮಯ್ಯನವರ ಈ ಬಜೆಟ್ ಯಾವುದೇ ದೂರದೃಷ್ಟಿ ಹೊಂದಿರದೆ ಕೇವಲ ನೀತಿ ಸಂಹಿತೆ ಜಾರಿಯಾಗುವವರೆಗೆ ತನ್ನ ಅವಧಿ ಎಂದು ಒಪ್ಪಿಕೊಂಡು ಮಂಡಿಸಿದ ಲೇಖಾನುದಾನವಾಗಿದೆ.