ಲೇಡಿಗೋಷನ್ ಆಸ್ಪತ್ರೆ ಬಳಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಪ್ರತಿಭಟನೆ ಎಚ್ಚರಿಕೆ – ದ.ಕ ಬೀದಿ ಬದಿ ವ್ಯಾಪಾರಸ್ಥರ ಸಂಘ
ಮಂಗಳೂರು : ಲೇಡಿಗೋಷನ್ ಆಸ್ಪತ್ರೆ ಮತ್ತು ಬೀದಿಬದಿ ವ್ಯಾಪಾರ ವಲಯದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡಿದ್ದಲ್ಲಿ ನಿಯಮ ಬಾಹಿರ ಲಾಕ್ ಡೌನ್ ಉಲ್ಲಂಘಿಸಿ ಪ್ರತಿಭಟನೆಯ ನಡೆಸಬೇಕಾದೀತು ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಎಚ್ಚರಿಕೆ ನೀಡಿದೆ.
ಕೇಂದ್ರ ಮಾರುಕಟ್ಟೆ ನೆಲಸಮಗೊಳಿಸಿ ನೂತನ ಮಾರುಕಟ್ಟೆ ನಿರ್ಮಾಣಕ್ಕಾಗಿ ಕೇಂದ್ರ ಮಾರುಕಟ್ಟೆಯಲ್ಲಿರುವ ಚಿಲ್ಲರೆ ವ್ಯಾಪಾರಿಗಳಿಗೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡಲು ಬೀದಿಬದಿ ವ್ಯಾಪಾರ ವಲಯವನ್ನು ಬಳಕೆ ಮಾಡಿರುವುದು ಬೀದಿಬದಿ ವ್ಯಾಪಾರಿಗಳಿಗೆ ಮಾಡಿದ ಅನ್ಯಾಯ ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU) ತೀವ್ರವಾಗಿ ಟೀಕಿಸಿದೆ. ಕಳೆದ ಎರಡು ತಿಂಗಳಿನಿಂದ ಕೋವಿಡ್ 19 ನಿಗ್ರಹ ಕ್ರಮ ಜಾರಿಯಲ್ಲಿರುವಾಗ ಜನರು ಯಾವುದೇ ಪ್ರತಿರೋಧ ತೋರಲು ಸಾಧ್ಯವಿಲ್ಲ ಎಂದು ಜಿಲ್ಲೆ ಮತ್ತು ನಗರಾಡಳಿತ ಕಾನೂನು ಬಾಹಿರ ತೀರ್ಮಾನಗಳನ್ನು ಜಾರಿ ಮಾಡುತ್ತಿದೆ.
ಲೇಡಿಗೋಷನ್ ಆಸ್ಪತ್ರೆ ಬಳಿ ಬಡ ಬೀದಿಬದಿ ವ್ಯಾಪಾರಿಗಳು 2ಅಡಿ ಜಾಗದಲ್ಲಿ ವ್ಯಾಪಾರ ಮಾಡುವಾಗ ಸಂಚಾರಕ್ಕೆ ಮತ್ತು ಆಸ್ಪತ್ರೆಗೆ ತೊಂದರೆ ಆಗುತ್ತದೆ ಎಂದು ಪದೇ ಪದೇ ಧಾಳಿ ಮಾಡುತ್ತಿದ್ದ ಪಾಲಿಕೆ ಅಧಿಕಾರಿಗಳು ಇದೀಗ 10ಅಡಿ ಉದ್ದ ರಸ್ತೆಯ ಮೇಲೆ ತಾತ್ಕಾಲಿಕ ಮಳಿಗೆಯನ್ನು ನಿಯಮ ಬಾಹಿರವಾಗಿ ನಿರ್ಮಾಣ ಮಾಡುತ್ತಿದ್ದಾರೆ ಆಸ್ಪತ್ರೆಯ ಗೋಡೆಗೆ ತಾಗಿಕೊಂಡು ಶೀಟುಗಳನ್ನು ಅಳವಡಿಸುತ್ತಿದ್ದಾರೆ. ಇದೇ ಲೇಡಿಗೋಷನ್ ಆಸ್ಪತ್ರೆಯ ಹೊರಭಾಗದಲ್ಲಿ 40ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿರುವ ನಗರ ಪಾಲಿಕೆಯಿಂದ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ಪಡೆದಿರುವ ಬೀದಿವ್ಯಾಪಾರಿಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಘೋರ ಅನ್ಯಾಯ ಮಾಡಿದೆ. ನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿ ಇದ್ದರೂ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತು ಸಮಿತಿಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೇ ಬೀದಿ ಬದಿ ವ್ಯಾಪಾರ ವಲಯನ್ನು ಇತರ ಉದ್ದೇಶಕ್ಕೆ ಬಳಸಿರುವುದು ಬೀದಿಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ 2014ರ ಸ್ಪಷ್ಟ ಉಲ್ಲಂಘನೆ ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘ ಹೇಳಿದೆ.
ಒಂದು ಕಡೆ ವ್ಯಾಪಾರ ವಲಯವನ್ನು ಕಸಿದು ಕೊಂಡು ಮತ್ತೊಂದೆಡೆ ಬೀದಿಯಲ್ಲೂ ವ್ಯಾಪಾರ ಮಾಡದ ರೀತಿಯಲ್ಲಿ ಜನ ವಿರೋಧಿ ತೀರ್ಮಾನ ಜಾರಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ.ಈಗಾಗಲೇ ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ ಬೀದಿಬದಿ ವ್ಯಾಪಾರಕ್ಕೆ ಇನ್ನೂ ಅವಕಾಶ ನೀಡಿಲ್ಲ ಕಳೆದ ಎರಡು ತಿಂಗಳಿನಿಂದ ಆದಾಯ ಇಲ್ಲದೆ ಬೀದಿಬದಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ ಒಂದು ಪೊಟ್ಟಣ ಆಹಾರದ ಪೊಟ್ಟಣವನ್ನು ಒದಗಿಸಲಾಗದ ಜಿಲ್ಲಾಡಳಿತ ಬೀದಿಬದಿ ವ್ಯಾಪಾರಿಗಳಿಗೆ ನೆರವು ನೀಡುವ ಬದಲು ಬಡ ವ್ಯಾಪಾರಿಗಳು ಮಾರಲು ತರುವ ಹಣ್ಣು ತರಕಾರಿಗಳನ್ನು ವಶಪಡಿಸಿ ತ್ಯಾಜ್ಯ ಕೊಂಡೊಯ್ಯುವ ಲಾರಿಗೆ ಸುರಿದು ಅವರ ತೂಕದ ಯಂತ್ರಗಳನ್ನು ವಶಪಡಿಸಿಕೊಂಡು ಅಮಾನವೀಯತೆ ಮೆರೆಯುತ್ತಿದೆ.
ಜಿಲ್ಲಾಡಳಿತ ಬೀದಿಬದಿ ವ್ಯಾಪಾರಿಗಳ ಮೇಲೆ ಕಠೋರವಾಗಿ ವರ್ತಿಸುವುದನ್ನು ನಿಲ್ಲಿಸಬೇಕು ಸಾಧ್ಯವಾಗದಿದ್ದರೆ ಸಾಮೂಹಿಕವಾಗಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಕುಟುಂಬಸಮೇತ ಪ್ರತಿಭಟನೆ ನಡೆಸಿ ಸಾಮೂಹಿಕ ಕ್ವಾರಂಟೈನ್ ಗೆ ಒಳಗಾಗುವಂಥ ತೀವ್ರ ರೀತಿಯ ಹೋರಾಟ ಹಮ್ಮಿಕೊಳ್ಳಬೇಕಾದೀತು ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.