ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ: ಎಬಿವಿಪಿ ಮಂಗಳೂರು
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಂದ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ವಿಶ್ವವಿದ್ಯಾಲಯದ ಕೊಠಡಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರೊ. ಅರಬಿ ಹಾಗೂ ಇದರ ತನಿಖಾ ವರದಿ ಮುಚ್ಚಿಟ್ಟ ಮಾಜಿ ಕುಲಸಚಿವ ಡಾ. ಎ.ಎಂ.ಖಾನ್ ಇವರನ್ನು ಕೆಲಸದಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಮಂಗಳೂರು ವಿಶ್ವವಿದ್ಯಾಲಯದ ಕುಲಾಧಿಪತಿ ಗಳಾದ ಘನತೆವೆತ್ತ ರಾಜ್ಯಪಾಲರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಮಂಗಳೂರು ಎಬಿವಿಪಿ ಘಟಕ ಮನವಿಯನ್ನು ಸಲ್ಲಿಸಲಾಯಿತು.
ಕಳೆದ ವಾರ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಗೆ ಬಂದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಂದ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ವಿಶ್ವವಿದ್ಯಾಲಯದ ಕೊಠಡಿಯಲ್ಲಿ ಈ ಹಿಂದೆ ದೌರ್ಜನ್ಯ ನಡೆಸಿರುವುದನ್ನು ಮತ್ತು ಸದರಿ ಪ್ರಕರಣದ ವಿಚಾರಣೆ ನಡೆದು ವರದಿ ನೀಡಿ ಎರಡು ವರ್ಷಗಳು ಸಂದಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದನ್ನು ಎಬಿವಿಪಿ ಬಲವಾಗಿ ಖಂಡಿಸುತ್ತದೆ. ಈ ವಿಚಾರವಾಗಿ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು ಸಹ ಯಾವುದೇ ಕ್ರಮ ಕೈಗೊಳ್ಳ ದೇ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ವಿಶ್ವವಿದ್ಯಾಲಯದ ಧೋರಣೆಯನ್ನು ವಿದ್ಯಾರ್ಥಿ ಪರಿಷತ್ ಬಲವಾಗಿ ಖಂಡಿಸುತ್ತದೆ.
ಈ ವೇಳೆ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಸಂದೇಶ್ ರೈ , ರಾಜ್ಯ ಕಾರ್ಯಕಾರಿಣಿ ಸದಸ್ಯ ನಿಶಾನ್ ಆಳ್ವ , ಎಬಿವಿಪಿ ಪ್ರಮುಖರಾದ ಹರ್ಶಿತ್ , ಸಂಜನ್ , ಆದಿತ್ಯ , ಸ್ವಸ್ತಿಕ್ , ಸಂತೋಷ್ ಉಪಸ್ಥಿತರಿದ್ದರು.