ಲೈಟ್‍ಹೌಸ್‍ಹಿಲ್ ರಸ್ತೆ ವಿವಾದಕ್ಕೆ ಶಾಸಕ ಲೋಬೊ ಮತ್ತು ಐವಾನ್ ಕಾರಣ : ಬಂಟ ಪ್ರತಿನಿಧಿಗಳ ಆರೋಪ

Spread the love

ಲೈಟ್‍ಹೌಸ್‍ಹಿಲ್ ರಸ್ತೆ ವಿವಾದಕ್ಕೆ ಶಾಸಕ ಲೋಬೊ ಮತ್ತು ಐವಾನ್ ಕಾರಣ : ಬಂಟ ಪ್ರತಿನಿಧಿಗಳ ಆರೋಪ

ಉಡುಪಿ:  ಬಂಟ ಸಮುದಾಯವಲ್ಲದೇ  ಇತರೆ ಸಮುದಾಯದವರಿಗೂ ಪರೋಪಕಾರಿಯಾಗಿದ್ದ ಕರಾವಳಿಯ ಮಹಾನ್ ಚೇತನ ಸುಂದರಾಮ್ ಶೆಟ್ಟಿ ಅವರ ಹೆಸರನ್ನು ಮಂಗಳೂರಿನ ಎಲ್‍ಎಚ್‍ಎಚ್ ಲೈಟ್ ಹೌಸ್ ಹಿಲ್‍ರೋಡ್ ರಸ್ತೆಗೆ  ಇಡುವ  ಯೋಜನೆಗೆ ತಡೆ ಬರುವಂತೆ ಮಾಡಲು ಮಂಗಳೂರು ಶಾಸಕ ಜೆ.ಆರ್.ಲೋಬೊ ಮತ್ತು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ನೇರ ಕಾರಣ ಎಂದು ವಿಶ್ವ ಬಂಟರ ಯಾನೆ ನಾಡವರ ಜನಜಾಗೃತಿ ಬಳಗ ಸಂಚಾಲಕ ಬೆಳ್ವೆ ವಸಂತ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು , ಕೇವಲ ಸ್ವಾರ್ಥ ಸಾಧನೆಗಾಗಿ ಒಳ್ಳೆಯ ವಿಷಯನ್ನು ವಿಷಯಾಂತರ ಮಾಡಿದ್ದು  ರಾಜಕಾರಣಿಗಳು, ಸಮುದಾಯದವರಲ್ಲಿ, ವಿದ್ಯಾರ್ಥಿಗಳಲ್ಲಿ ಶಾಸಕ ಲೋಬೊ, ಐವಾನ್ ಡಿಸೋಜ ಈ ಉಭಯ ಶಾಸಕರು ಇಲ್ಲ ಸಲ್ಲದ ವಿಷಯ ತುಂಬಿ ರಾಜಕೀಯ ಮಾಡುತಿದ್ದಾರೆ ಎಂದು ಆರೋಪಿಸಿದರು. ಇಂಥ ವಿಚಾರದಲ್ಲಿ ಸಮಾಜದ ಭಂಗ ಕೆಡಿಸುವವ ಮಂದಿಗೆ ತಕ್ಕ ಉತ್ತರ ನೀಡಲಾಗುವುದು. ಸರ್ಕಾರ ಮೊದಲು ಕೈಗೊಂಡಿರುವ ಸಕಾಲಿಕ ನಿರ್ಣಯವನ್ನು ಕಾರ್ಯಗತಗೊಳಿಸಲು ಸುಂದರಾಮ್ ಶೆಟ್ಟಿ ಅಭಿಮಾನಿಗಳು ಜಾತಿ, ಮತ, ಧರ್ಮ ಎಲ್ಲೆ ಮೀರಿ ಹೋರಾಟಕ್ಕೆ ಸಿದ್ದರಾಗಿದ್ದೇವೆ ಎಂದರು.

ರಸ್ತೆಗೆ ಮುಲ್ಕಿ ಸಂದರಾಮ್ ಶೆಟ್ಟಿ ಎಂದು ನಾಮಕರಣ ಮಾಡಿ, ಜುಲೈ.2 ರಂದು ನಾಮಫಲಕ ಅನಾವರಣ ಮಾಡಲು ನಿಗಧಿ ಮಾಡಲಾಗಿತ್ತು. ಈ ವಿಚಾರದಲ್ಲಿ  ರಾಜಕೀಯವಾಗಿ ಅನಗತ್ಯ ವಿಷ ಬೀಜಗಳನ್ನು ಬಿತ್ತಿ, ಸಮಾಜದಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡಲಾಗುತ್ತಿದೆ. ಪ್ರಕರಣದ ನೈಜ ಸ್ಥಿತಿಯನ್ನು ತಿಳಿಸದೇ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಮುಗ್ದ ವಿದ್ಯಾರ್ಥಿಗಳನ್ನು , ಕ್ರಿಶ್ಚಿಯನ್ ಸಮುದಾಯ ಬಾಂಧವರನ್ನು ಎತ್ತಿಕಟ್ಟಲಾಗುತ್ತಿದೆ ಎಂದು ಅವರು ಆರೋಪಿಸಿದರು. ಈ ನಡೆಯಿಂದ ತಪ್ಪಾಗಿ ಅರ್ಥೈಸಿಕೊಂಡ ಅಧಿಕಾರಿಗಳು ಜುಲೈ.2 ಕಾರ್ಯಕ್ರಮವನ್ನು ತಾತ್ಕಲಿಕವಾಗಿ ತಡೆಗೊಳಿಸಿದ್ದಾರೆ. ಸಮಾಜಕ್ಕೆ ಅನನ್ಯ ಕೊಡುಗೆ, ಮಾನವೀಯ ಮೌಲ್ಯ, ಜಾತ್ಯತೀತ ನಿಲುವಿನ ಮಹಾನ್ ಚೇತನ ಮುಲ್ಕಿ ಸುಂದರ್‍ರಾಮ್ ಶೆಟ್ಟಿ ಅವರಿಗೆ ಅವಮಾನ ಮಾಡಿದಂತಾಗಿದೆ ಎಂದು ಅವರು ಅಸಮದಾನ ವ್ಯಕ್ತಪಡಿಸಿದರು.

ರಸ್ತೆಗೆ ಸುಂದರಾಮ್ ಶೆಟ್ಟಿ ಅವರ ಹೆಸರೇ ಇಡಬೇಕು. ಅವರ ಘನತೆ,. ಗೌರವವನ್ನು ಎತ್ತಿ ಹಿಡಿಯಬೇಕು. ಈ ವಿಚಾರದಲ್ಲಿ ಜುಲೈ.8ನೇ ತಾರೀಕಿನ ಒಳಗಾಗಿ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ತೀರ್ಮಾನ ಮಾಡದೇ ಹೋದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಸಂಘದ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಬಾಸ್ಕರ್ ರೈ, ಸಂಚಾಲಕ ಎಂ.ಚಂದ್ರಶೇಖರ ಹೆಗ್ಡೆ, ಕಾನೂನು ಸಲಹೆಗಾರ ಕೃಷ್ಣರಾಜ್ ಶೆಟ್ಟಿ ಚೋರಾಡಿ ಉಪಸ್ಥಿತರಿದ್ದರು.


Spread the love