Home Mangalorean News Kannada News ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಿಲ್ಲ- ಎಐಸಿಸಿ ಸದಸ್ಯ ಅಮೃತ್ ಶೆಣೈ

ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಿಲ್ಲ- ಎಐಸಿಸಿ ಸದಸ್ಯ ಅಮೃತ್ ಶೆಣೈ

Spread the love

ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಿಲ್ಲ- ಎಐಸಿಸಿ ಸದಸ್ಯ ಅಮೃತ್ ಶೆಣೈ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪಕ್ಷದ ಹೈಕಮಾಂಡ್ ಜೆಡಿಎಸ್ ಪಕ್ಷಕ್ಕೆ ಮೀಸಲಾಗಿರಿಸಿರುವುದನ್ನು ವಿರೋಧಿಸಿ ನನ್ನ ಕಾಂಗ್ರೆಸ್ ಪಕ್ಷ ಹಾಗೂ ಎಐಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಿಲ್ಲ ಅಲ್ಲದೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ಎಐಸಿಸಿ ಸದಸ್ಯ ಅಮೃತ್ ಶೆಣೈ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಟಿಕೇಟ್ ಹಂಚಿಕೆ ನಿರ್ಣಯದ ಪ್ರಕಾರ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷ ಬಿಟ್ಟು ಕೊಟ್ಟಿದೆ. ಪಕ್ಷದ ನಾಯಕರು ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆ ಎನ್ನುವುದು ಉಡುಪಿ – ಚಿಕ್ಕಮಗಳೂರಿನ ಯಾವುದೇ ನಾಯಕರಿಗೆ ಮಾಹಿತಿ ಇಲ್ಲ. ಈ ನಿರ್ಧಾರವನ್ನು ವಿರೋಧಿಸಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸಭೆಗಳನ್ನು ನಡೆಸಿ ವರದಿಯನ್ನು ಪ್ರದೇಶ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಜನತಾ ದಳ ಪಕ್ಷದ ಮತ ಹಾಗೂ ಅದರ ಅಸ್ತಿತ್ವ ಕಡಿಮೆ ಎನ್ನುವುದು ಸರ್ವರಿಗೂ ತಿಳಿದ ವಿಚಾರವಾಗಿದೆ ಆದ್ದರಿಂದ ಈ ಸೀಟನ್ನು ಮತ್ತೆ ಕಾಂಗ್ರೆಸಿಗೆ ನೀಡುವಂತೆ ಜಿಲ್ಲಾ ನಾಯಕರುಗಳು ವಿನಂತಿ ಮಾಡಿರುತ್ತಾರೆ.

ನಾನು ಕೂಡ ಎಐಸಿಸಿಯ ಒರ್ವ ಸದಸ್ಯನಾಗಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನಗೂ ಕೂಡ ನೋವಾಗಿದೆ, ನನ್ನ ಜೊತೆ ಜೊತೆಯಲ್ಲಿ ಸಾವಿರಾರು ಕಾರ್ಯಕರ್ತರ ಅಭಿಪ್ರಾಯದಂತೆ ಈ ನಿರ್ಧಾರ ತಪ್ಪು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ನಿನ್ನೆಯ ದಿನ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಟೈರ್ ಸುಡುವ ಮೂಲಕ ಪ್ರತಿಭಟಿಸಿದರೆ ಇಂದು ಕೊಪ್ಪ ಬ್ಲಾಕ್ ಕಾಂಗ್ರೆಸ್ ಕೂಡ ಸಭೆ ನಡೆಸಿ ಪಕ್ಷದ ನಿರ್ಧಾರವನ್ನು ವಿರೋಧಿಸಿದೆ.

ಒಂದು ಹಂತದಲ್ಲಿ ಭಾರತದ ಎಲ್ಲಾ ಜಾತ್ಯಾತೀತ ಪಕ್ಷಗಳು ಜೊತೆಯಾಗಿ ಸೇರಿ ಮೋದಿಯವರನ್ನು ಸೋಲಿಸಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶವಾಗಿದೆ. ಆದರೆ ಎಲ್ಲಾ ಮಾನದಂಡಗಳನ್ನು ಅಳೆದು ಜೆ ಡಿಎಸ್ ಗೆ ಎಷ್ಟು ಸೀಟುಗಳು ಮತ್ತು ಯಾವ ಕ್ಷೇತ್ರಗಳನ್ನು ನೀಡಬೇಕು ಎಂದು ಚರ್ಚೆ ಮಾಡಲಾಗಿದೆ ಎಂಬ ಕುರಿತು ನನ್ನಲ್ಲಿ ಯಾವುದೇ ಮಾಹಿತಿ ಇಲ್ಲ. ನನಗೆ ನೋವಾಗಿದ್ದು ನಿಜ ಆದರೂ ಇಂತಹ ವಿಚಾರಗಳನ್ನು ಪಕ್ಷದ ವೇದಿಕೆ ಬಿಟ್ಟು ಹೊರಗಡೆ ಚರ್ಚೆ ಮಾಡಿದ್ದಲ್ಲ. ಆದ್ದರಿಂದ ನನ್ನ ಪ್ರತಿಭಟನೆಯನ್ನು ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡಿ ಸಲ್ಲಿಸುತ್ತೇನೆ ಎಂದರು.

ಹೈಕಮಾಂಡ್ ನಿರ್ಧಾರ ವಿರೋಧಿಸಿ ನಾನು ಕಾಂಗ್ರೆಸ್ ಪಕ್ಷ ಅಥವಾ ಎಐಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ನಾನೊಬ್ಬ ಹುಟ್ಟು ಕಾಂಗ್ರೆಸಿಗ ಮತ್ತು ಸದಾ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟನಾಗಿರುವುದರಿಂದ ಪಕ್ಷೇತರನಾಗಿ ಸ್ಪರ್ಧಿಸುವ ಪ್ರಶ್ನೆಯೂ ಇಲ್ಲ ಎಂದರು.


Spread the love

Exit mobile version