ದ.ಕ. ಜಿಲ್ಲೆಯಲ್ಲಿ 17,96,826 ಮತದಾರರು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ಚುನಾವಣಾ ಆಯೋಗದ ನಿರ್ದೇಶನದಂತೆ ದ.ಕ. ಜಿಲ್ಲೆಯಲ್ಲಿ ಎಪ್ರಿಲ್ 26ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, 2024ರ ಮಾರ್ಚ್ 15ರವರೆಗೆ ಜಿಲ್ಲೆಯಲ್ಲಿ ಒಟ್ಟು 17,96,826 ಮತದಾರರಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿನಲ್ ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಒಟ್ಟು 35,689 ಯುವ ಮತದಾರರನ್ನು ಗುರುತಿಸಲಾಗಿದ್ದು, 85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಸೇರಿದಂತೆ 36082 ಮತದಾರರಿದ್ದಾರೆ ಎಂದು ಅವರು ಹೇಳಿದರು.
ಮತದಾನದ ಹಿಂದಿನ ದಿನದವರೆಗೆ ಕಾಯುವ ಬದಲು ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವು ದನ್ನು ಖಾತರಿಪಡಿಸಿಕೊಂಡು ತಮ್ಮ ಮತದಾನದ ಕೇಂದ್ರಗಳನ್ನು ತಿಳಿದುಕೊಳ್ಳುವುದು ಉತ್ತಮ. ಸಾರ್ವಜನಿಕರು ವೆಬ್ಸೈಟ್ https://voters.eci.gov.in ನಲ್ಲಿ ಮತದಾರರ ಪಟ್ಟಿಗೆ ಸಂಬಂಧಿತ ಅರ್ಜಿಗಳು ಮತ್ತು ಸೇವೆಗಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಡಿಜಿಟಲ್ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಹಿಂದಿನ ಘಟನೆಗಳ ವೀಡಿಯೋ, ವರದಿ ಅಥವಾ ಫೋಟೋ ಗಳನ್ನು ಬಳಸಿ ವದಂತಿಗಳನ್ನು ಹಬ್ಬಿಸಿದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ 8 ಮಾದರಿ ನೀತಿ ಸಂಹಿತೆ ತಂಡಗಳು, 24 ವೀಡಿಯೋ ವಿಚಕ್ಷಣ ತಂಡಗಳು, 8 ವೀಡಿಯೋ ಪರಿಶೀಲನಾ ತಂಡ, 72 ಫ್ಲೈಯಿಂಗ್ ಸ್ಕಾಡ್ಗಳು, 186 ಸೆಕ್ಟರ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಸಿವಿಜಿಲ್ ಆಯಪ್ ಮೂಲಕ ಸಾರ್ವಜನಿಕರು ಮಾಹಿತಿ ಅಥವಾ ದೂರನ್ನು ನೀಡಬಹುದಾಗಿದ್ದು, ದೂರು ಅಥವಾ ಮಾಹಿತಿ ನೀಡುವವರ ಗುರುತು ಗೌಪ್ಯವಾಗಿರುತ್ತದೆ. ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಸಭೆ, ಧಾರ್ಮಿಕ ಕಾರ್ಯಕ್ರಮ, ರಾಜಕೀಯ ಸಭೆ, ಪ್ರಚಾರ ಸಭೆ ನಡೆಸಲು ಸಾರ್ವಜನಿಕರು ಅಥವಾ ರಾಜಕೀಯ ಪಕ್ಷದವರು ಚುನಾವಣಾಧಿಕಾರಿಗಳು ಅಥವಾ ಸಹಾಯಕ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಫ್ಲೈಯಿಂಗ್ ಸ್ಕಾಡ್ ಟೀಮ್, ಸ್ಟಾಟಿಕ್ ಸರ್ವೆಲೆನ್ಸ್ ಟೀಮ್, ವೀಡಿಯೋ ಸರ್ವೆಲೆನ್ಸ್ ಟೀಮ್ಗಳು ಎಲ್ಲಾ ರೀತಿಯ ಕಾರ್ಯಕ್ರಮಗಳ ಮೇಲೆ ನಿಗಾವ ಹಿಸಲಿವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 3 ಅಂತರ್ ರಾಜ್ಯ ಗಡಿಗಳು ಸೇರಿದಂತೆ 12 ಚೆಕ್ಪೋಸ್ಟ್ಗಳನ್ನು ರಚಿಸಲಾಗಿದ್ದು, ಅಕ್ರಮ ಹಣ ಅಥವಾ ಮದ್ಯ ರವಾನೆ ಬಗ್ಗೆ ನಿಗಾ ಇರಿಸಲಾಗಿದೆ. ಶಾಂತಿಯುತ ಚುನಾವಣೆಗೆ ಸಂಬಂಧಿಸಿ, ಶಾಂತಿಗೆ ಭಂಗ ಮಾಡುವವರ ಮೇಲೆ ಪ್ರತಿಬಂಧಕ ಕ್ರಮಗಳಿಗೆ ಇಲಾಖೆ ಮುಂದಾಗಿದ್ದು, ಈಗಾಗಲೇ ನಗರ ವ್ಯಾಪ್ತಿಯಲ್ಲಿ 777 ಮಂದಿಯ ವಿರುದ್ಧ ಕ್ರಮ ವಹಿಸಲಾಗಿದೆ. ಸಮಾಜದಲ್ಲಿ ತೊಂದರೆ ನೀಡುವವರನ್ನು ಗಡೀಪಾರು, ಗೂಂಡಾಕಾಯ್ದೆ ಮೂಲಕ ನಿಯಂತ್ರಿಸಲಾಗುತ್ತಿದ್ದು, ಇಂದು ಓರ್ವನ ಗಡಿಪಾರು ಮಾಡಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನು (ಕೋವಿ, ಬಂದೂಕು, ಗನ್ ಸೇರಿದಂತೆ) ಪೊಲೀಸರು ವಶಪಡಿಸಿಕೊಳ್ಳಲಿದ್ದು, ನಗರದಲ್ಲಿ ಇಂತಹ 1700 ಮಂದಿ ಶಸ್ತ್ರಾಸ್ತ್ರ ಪರವನಿಗೆದಾರರಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದರು.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯವಲ್ಲಿ 7 ಅಂತರ್ ರಾಜ್ಯ ಗಡಿಗಳು ಸೇರಿದಂತೆ 11 ಚೆಕ್ಪೋಸ್ಟ್ಗಳನ್ನು ರಚಿಸಲಾಗಿದೆ. ಹಿಂದಿನ ಚುನಾವಣೆ ಸೇರಿದಂತೆ ಅಪರಾಧ ಹಿನ್ನೆಲೆಯಳ್ಳ 1058 ಮಂದಿಯ ವಿರುದ್ಧ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 57 ಮಂದಿಯ ಗಡೀಪಾರಿಗೆ ಪ್ರಸ್ತಾವನೆ ಮಾಡಲಾಗಿದೆ. ಗೂಂಡಾಕಾಯ್ದೆಯ ಬಗ್ಗೆಯ ಕ್ರಮ ನಡೆಯುತ್ತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 9000 ಶಸ್ತ್ರಾಸ್ತ್ರ ಪರವಾನಿಗೆದಾರರಿದ್ದಾರೆ ಎಂದು ಪೊಲೀಸ್ ವರಿಷ್ಟಾಧಿಕಾರಿ ರಿಷ್ಯಂತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಸಹಾಯಕ ಚುನಾವಣಾಧಿರಿಗಳು ಉಪಸ್ಥಿತರಿದ್ದರು.