ವಕ್ಫ್ ಆಸ್ತಿ ವಿವಾದ: ಬಿಜೆಪಿಗರ ಗೋಸುಂಬೆತನ ಸಾಬೀತು – ವೆರೋನಿಕಾ ಕರ್ನೆಲಿಯೋ
ಉಡುಪಿ: ಬಿಜೆಪಿಗರೇ, ‘ವಕ್ಫ್ ಭೂಮಿ ಅಲ್ಲಾನಿಗೆ ಸೇರಿದ್ದು ಅದನ್ನು ಮರಳಿ ಪಡೆಯುವುದರಲ್ಲಿ ಯಾವುದೇ ರಾಜಿ ಬೇಡ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರ ವಿರುದ್ದ ಯಾಕೆ ಮೌನ ವಹಿಸಿದ್ದೀರಿ?. ಬಿಜೆಪಿಗರು ಎರಡು ನಾಲಗೆಯವರು ಎಂದು ಇದರಲ್ಲಿ ಸಾಬೀತಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು. ಈಗ ರಾಜಕೀಯ ಕಾರಣಕ್ಕಾಗಿ ವಿರುದ್ಧವಾಗಿ ಮಾತನಾಡುತ್ತಾರೆ. ಅವರೇ ಹೇಳಿದ್ದ ಮಾತುಗಳಿಗೆ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿರುವುದು ಬಿಜೆಪಿಗರ ಗೋಸುಂಬೆತನ ತೋರಿಸುತ್ತದೆ.
ಬಿಜೆಪಿ, ರಾಜಕಾರಣಕ್ಕಾಗಿ ಈ ವಿಚಾರವನ್ನು ಇಟ್ಟುಕೊಂಡು ಹೋರಾಡುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲೂ ನೋಟೀಸು ಕೊಟ್ಟಿದ್ದಾರೆ, ಎಲ್ಲಾ ಕಾಲದಲ್ಲಿಯೂ ನೋಟೀಸು ನೀಡಲಾಗಿದೆ ಎಂದು ಜನರಿಗೆ ಅರ್ಥವಾಗಿದೆ. ಹಿಂದೆ ಇದೇ ಬಿಜೆಪಿ, ವಕ್ಫ್ ಬೋರ್ಡ್ಗೆ ಬೆಂಬಲವಾಗಿ ನಿಂತಿತ್ತು. ರೈತರ ಭೂಮಿ ಕಸಿಯಲು ಕುಮ್ಮಕ್ಕು ನೀಡಿತ್ತು ಎನ್ನುವದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಇಲ್ಲಿನ ಮಾತುಗಳೇ ಸಾಕ್ಷಿ. ‘ವಕ್ಫ್ ಭೂಮಿ ಅಲ್ಲಾನಿಗೆ ಸೇರಿದ್ದು, ಅದನ್ನು ಮರಳಿ ಪಡೆಯುವುದರಲ್ಲಿ ಯಾವುದೇ ರಾಜಿ ಬೇಡ. ₹2000 ಕೋಟಿ ಮೊತ್ತದ ವಕ್ಫ್ ಆಸ್ತಿ ಖಾಸಗಿಯವರ ವಶದಲ್ಲಿದೆ, ಅದನ್ನು ಮರಳಿ ಪಡೆಯುವವರೆಗೂ ನೀವು ಸುಮ್ಮನೆ ಕೂರಬಾರದು ನಾವೂ ಸುಮ್ಮನೆ ಕೂರಬಾರದು, ನಿಮ್ಮ ಜೊತೆಗೆ ನಾವಿದ್ದೇವೆ’ ಇದು ಅಂದಿನ ಸಿಎಂ ಬೊಮ್ಮಯಿಯವರೇ ಹೇಳಿದ್ದರು.
ವಕ್ಫ್ ಆಸ್ತಿ ವಿಚಾರ ಸರಕಾರದ ಗಮನಕ್ಕೆ ಬಂದ ತಕ್ಷಣವೇ, ನೋಟೀಸು ಹಿಂಪಡೆಯಲಾಗಿದೆ . ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟೀಸು ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಹೆಚ್.ಡಿ ಕುಮಾಸ್ವಾಮಿ ಇದ್ದಾಗ ಏಕೆ ನೋಟೀಸು ಕೊಟ್ಟಿದ್ದಾರೆ? ಬಿಜೆಪಿಯ ಈ ಡಬ್ಬಲ್ ಗೇಮ್ ವಿಚಾರವನ್ನು ಜನರಿಗೆ ಕಾಂಗ್ರೆಸ್ ಪಕ್ಷ ತಲುಪಿಸಲಿದೆ.
ಸರಕಾರ ಕಾನೂನು ರೀತಿಯಲ್ಲಿ ನೋಟಿಸನ್ನ ನೀಡಿದ್ದರೂ ಕೂಡ, ಅದರ ಕುರಿತು ಸೂಕ್ತ ವಿಚಾರಣೆ ನಡೆಸಿ ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರೂ ಕೂಡ, ಬಿಜೆಪಿಗರು ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡುವ ಕೆಲಸ ಮಾಡುತ್ತಿರುವುದು ದುರಂತ. ಸಮಾಜವನ್ನು ಒಡೆದು ಆಳುವುದೇ ಬಿಜೆಪಿಗರ ಮೂಲ ಮಂತ್ರವಾಗಿದ್ದು, ದೇಶದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬದುಕಿದರೆ, ಬಿಜೆಪಿಗರ ರಾಜಕೀಯಕ್ಕೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ, ಇಂತಹ ವರ್ತನೆ ತೋರುತ್ತಿದ್ದಾರೆ.
ಉಡುಪಿಯಲ್ಲಿ ಕೂಡ ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಕೂಡ, ಶಿವಳ್ಳಿ ಗ್ರಾಮದ ಜಾಗವನ್ನು ಸುಲ್ತಾನ್ ಪುರ ಎಂದು ನಮೂದಿಸಲಾಗಿದೆ ಎಂಬ ವಾಟ್ಸಾಪ್ ಯುನಿವರ್ಸಿಟಿಯನ್ನೇ ನಂಬಿಕೊಂಡಿರುವ ಬಿಜೆಪಿಗರು, ಸುಳ್ಳು ಪ್ರಚಾರ ಮಾಡಿದ್ದರು. ಅಂತಹ ಯಾವುದೇ ಸುಲ್ತಾನ್ ಪುರ ಎಂಬ ಹೆಸರು ನಮೂದಾಗಿಲ್ಲ ಎಂದು,ಜಿಲ್ಲಾಧಿಕಾರಿಗಳೇ ಸ್ಪಷ್ಟನೇ ನೀಡಿದ್ದರೂ ಕೂಡ, ಬಿಜೆಪಿಗರು ಜನರಲ್ಲಿ ಸುಳ್ಳು ಭಾವನೆ ಮೂಡಿಸುವ ಕೆಲಸ ಮಾಡಿರುವುದು ಖಂಡನೀಯ. ಬಿಜೆಪಿಗರಿಗೆ ನಿಜವಾದ ಜವಾಬ್ದಾರಿ ಇದ್ದರೆ, ಉಡುಪಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಜಿಲ್ಲೆಯ ಐದು ಶಾಸಕರೂ, ಸಂಸದರೂ ಬಿಜೆಪಿಯವರೇ ಆಗಿದ್ದರೂ ಕೂಡ, ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಅದನ್ನು ಮೊದಲು ಮಾಡಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.