ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಗಂಗಾಧರ ಹಿರೇಗುತ್ತಿ ಆಯ್ಕೆ

Spread the love

ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಗಂಗಾಧರ ಹಿರೇಗುತ್ತಿ ಆಯ್ಕೆ

ಕುಂದಾಪುರ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪ್ರತಿ ವರ್ಷ ಮುಂಗಾರು ಪತ್ರಿಕೆಯ ಸಂಪಾದಕ ದಿ| ವಡ್ಡರ್ಸೆ ರಘುರಾಮ ಶೆಟ್ಟಿ ಹೆಸರಲ್ಲಿ ಕೊಡಮಾಡುವ ಪತ್ರಿಕೋದ್ಯಮ ಪ್ರಶಸ್ತಿಗೆ ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಈ ಬಾರಿ ಆಯ್ಕೆಯಾಗಿದ್ದಾರೆ ಎಂದು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ತಿಳಿಸಿದ್ದಾರೆ.

ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪತ್ರಿಕಾ ವಿತರಕರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಗಂಗಾಧರ ಹಿರೇಗುತ್ತಿಯವರು ಪತ್ರಿಕೋದ್ಯಮದ ಕುರಿತು ಬಾಲ್ಯದಲ್ಲೇ ಹಲವು ಕನಸುಗಳನ್ನು ಕಂಡಿದ್ದರು. ಅನಂತರ `ಮುಂಗಾರು’ ದಿನಪತ್ರಿಕೆಯಲ್ಲಿ ಉತ್ತರ ಕನ್ನಡದ ವರದಿಗಾರನಾಗಿ 10 ವರ್ಷ ಸೇವೆ ಸಲ್ಲಿಸಿ ಕಾರವಾರದ ಜಿಲ್ಲಾ ಕೇಂದ್ರದಿಂದ `ಕರಾವಳಿ ಮುಂಜಾವು’ ದಿನಪತ್ರಿಕೆ ಆರಂಭಿಸಿದ್ದು, ಪ್ರಸ್ತುತ ಈ ಪತ್ರಿಕೆ ರಾಜ್ಯದ ಪ್ರಸಿದ್ಧ ದಿನಪತ್ರಿಕೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಅತ್ಯುನ್ನತ ಸಾಧನೆಗಾಗಿ ಹಿರೇಗುತ್ತಿಯವರಿಗೆ ಮೊಹರೆ ಹನುಮಂತರಾಯ ಪ್ರಶಸ್ತಿ, ಸಾಧನ ರಾಷ್ಟ್ರೀಯ ಪ್ರಶಸ್ತಿಗಳು ಸಂದಿದೆ. ವಡ್ಡರ್ಸೆಯವರ ಪತ್ರಿಕೋದ್ಯಮದ ಆದರ್ಶ ಮತ್ತು ಸಮಾಜವಾದಿ ನಿಲುವನ್ನು ಮೈಗೂಡಿಸಿಕೊಂಡ ಹಿರೇಗುತ್ತಿಯವರಿಗೆ ಈ ಪ್ರಶಸ್ತಿ ನೀಡಿ ಗೌರವಿಸುವುದು ಹೆಮ್ಮೆಯ ವಿಚಾರ ಎಂದರು.

ಅ.11ರಂದು ಅಪರಾಹ್ನ 4.30ಕ್ಕೆ ಬ್ರಹ್ಮಾವರದ ಬಂಟರ ಭವನದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಾಹಿತಿ ಅಂಬಾತನಯ ಮುದ್ರಾಡಿ ಪ್ರಶಸ್ತಿ ಪ್ರದಾನಗೈಯಲಿದ್ದಾರೆ ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.


Spread the love