ವಯನಾಡ್ ದುರಂತ: ಉಡುಪಿ ಧರ್ಮಪ್ರಾಂತ್ಯ ಕಳವಳ – ನೆರವಿಗೆ ಮನವಿ

Spread the love

ವಯನಾಡ್ ದುರಂತ: ಉಡುಪಿ ಧರ್ಮಪ್ರಾಂತ್ಯ ಕಳವಳ – ನೆರವಿಗೆ ಮನವಿ

ಉಡುಪಿ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತೀವ್ರ ಕಳವಳ ವ್ಯಕ್ತಪಡಿಸಿದ್ದು, ದುರಂತದಲ್ಲಿ ನಿರಾಶ್ರಿತರಾದವರ ನೆರವಿಗೆ ಧರ್ಮಪ್ರಾಂತ್ಯ ಎಲ್ಲಾ ರೀತಿಯ ಸಹಕಾರ ನೀಡಲು ಬಯಸಿದೆ ಎಂದು ಹೇಳಿದ್ದಾರೆ.

ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದಿಂದ ಮಾಹಿತಿಗಳ ಪ್ರಕಾರ ಈಗಾಗಲೇ 150ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಇನ್ನೂ ಹಲವಾರು ಮಂದಿ ನಾಪತ್ತೆಯಾಗಿದ್ದು ಅವರುಗಳ ಹುಡುಕಾಟ ಕಾರ್ಯ ನಡೆಯುತ್ತಿದೆ. ಅಲ್ಲದೆ ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕತ್ಸೆ ಪಡೆಯುತ್ತಿದ್ದು, ಎಲ್ಲಾ ಸಂತ್ರಸ್ತರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಕ್ಷಣಾ ಕಾರ್ಯಾದಲ್ಲಿ ಸೇನೆ, ಸರಕಾರದೊಂದಿಗೆ ಎಲ್ಲಾ ಸ್ವಯಂ ಸೇವಾ ಸಂಘಟನೆಗಳು ಕೈ ಜೋಡಿಸಿವೆ.

ಭೂಕುಸಿತ, ಜಲಸ್ಫೋಟ ಹಾಗೂ ಕರ್ನಾಟಕದ ಹಲವೆಡೆ ಕೂಡ ಭಾರೀ ಮಳೆಯಿಂದ ಅಪಾರ ಹಾನಿಯಾಗುತ್ತಿದೆ. ಇವೆಲ್ಲವುಗಳಿಂದ ರಕ್ಷಣೆ ಪಡೆಯಲು ಹಾಗೂ ಮೃತರ ಆತ್ಮಗಳ ಸದ್ಗತಿಗಾಗಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲು ಸೂಚಿಸಲಾಗಿದೆ. ಅಲ್ಲದೆ ನಿರಾಶ್ರಿತರು ಮತ್ತೆ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ನೆರವನ್ನು ಧರ್ಮಪ್ರಾಂತ್ಯದ ವತಿಯಿಂದ ಸಂಗ್ರಹಿಸಿ ನೀಡಲು ಈಗಾಗಲೇ ನಿರ್ಧರಿಸಲಾಗಿದ್ದು ಸಹೃದಯ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರವು ನೀಡಲು ಧರ್ಮಾಧ್ಯಕ್ಷರು ಮನವಿ ಮಾಡಿದ್ದಾರೆ.


Spread the love