ವಲಯ ಅರಣ್ಯಾಧಿಕಾರಿಗೆ ನಿಂದನೆ ಆರೋಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲು
ಧರ್ಮಸ್ಥಳ: ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪದ ಮೇಲೆ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಲಯ ಅರಣ್ಯಾಧಿಕಾರಿಗಳನ್ನು ನಿಂದನಾತ್ಮಕ ಪದಗಳಿಂದ ನಿಂದಿಸಿದ್ದು, ಬೆದರಿಕೆಯನ್ನು ಕೂಡ ಹಾಕಿದ್ದಾರಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಕೆ ಕೆ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ಕಟ್ಟಲು ಮುಂದಾಗಿದ್ದ ಮನೆಯ ತೆರವಿಗೆ ಮುಂದಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಶಾಸಕ ಹರೀಶ್ ಪೂಂಜಾ ಅವರು ವಾಗ್ವಾದ ನಡೆಸಿದ್ದರು. ಈ ಘಟನೆಯ ವೀಡಿಯೋ ತಡವಾಗಿ ವೈರಲ್ ಆಗಿದೆ.
ಪ್ರಕರಣ ಹಿನ್ನೆಲೆ: ಅರಣ್ಯ ಭೂಮಿಯ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಕಾರಣವಾಗಿದ್ದ ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದ ಸರ್ವೆ ನಂಬರ್ 309 ರ ನಿಡ್ಲೆ ವಿಸ್ತೃತ ಬ್ಲಾಕ್ 2ರಲ್ಲಿ ಅಮ್ಮಿನಡ್ಕ -ಕೆದ್ದ ನಿವಾಸಿ ಲೋಲಾಕ್ಷ ಯಾನೆ ಅನಂತು ಅವರು ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ನೂತನ ಮನೆ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ಮಂಗಳೂರು ಅರಣ್ಯ ಇಲಾಖೆಗೆ ದೂರು ಬಂದಿತ್ತು.
ಈ ಹಿನ್ನೆಲೆ ಅಕ್ಟೋಬರ್ 6 ರಂದು ಅರಣ್ಯ ಇಲಾಖೆ ಸಿಬ್ಬಂದಿ ನೂತನ ಮನೆಯ ಫೌಂಡೇಶನ್ ತೆರವುಗೊಳಿಸಿದ್ದರು.ಘಟನೆ ವಿಚಾರ ತಿಳಿದು ಶಾಸಕ ಹರೀಶ್ ಪೂಂಜ ಅವರು ಅಕ್ಟೋಬರ್ 7 ರಂದು ಸ್ಥಳಕ್ಕೆ ಭೇಟಿ ನೀಡಿ ಅರಣ್ಯಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ಹರಿದಾಡಿದ್ದವು.