ವಲಸೆ ಕಾರ್ಮಿಕರಿಗೆ ಕೊಳೆತ ಅಕ್ಕಿ ತನಿಖೆಗೆ ಡಿವೈಎಫ್‌ಐ ಒತ್ತಾಯ

Spread the love

ವಲಸೆ ಕಾರ್ಮಿಕರಿಗೆ ಕೊಳೆತ ಅಕ್ಕಿ ತನಿಖೆಗೆ ಡಿವೈಎಫ್‌ಐ ಒತ್ತಾಯ

ಮಂಗಳೂರು: ಉದ್ಯೋಗ, ಆಹಾರ ಇಲ್ಲದೆ, ಊರುಗಳಿಗೆ ತೆರಳಲು ಸರಿಯಾದ ಪ್ರಯಾಣ ವ್ಯವಸ್ಥೆ ಇಲ್ಲದ ಬೀದಿಗೆ ಬಿದ್ದಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ಕೊಳೆತ ಅಕ್ಕಿ ವಿತರಿಸಿರುವುದು ಆಘಾತಕಾರಿ. ಈ ಪ್ರಕರಣ ಬಯಲಿಗೆ ಬಂದಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ 19 ಪರಿಹಾರ ಕ್ರಮ, ಹಾಗೂ ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ಬಲವಾಗುತ್ತಿದ್ದು, ರಾಜ್ಯ ಸರಕಾರ ಈ ಕುರಿತು ಪ್ರತ್ಯೇಕ ತನಿಖೆ ನಡೆಸಲು ಡಿವೈಎಫ್ ಐ ದ.ಕ ಜಿಲ್ಲಾ ಸಮಿತಿ  ಒತ್ತಾಯಿಸುತ್ತದೆ.

ಜೋಕಟ್ಟೆ ಪರಿಸರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಎಮ್ ಆರ್ ಪಿ ಎಲ್, ಎಸ್ ಇ ಝಡ್‌ಗಳ ಗುತ್ತಿಗೆದಾರರ ಅಡಿ ದುಡಿಯುವ ಈ ಕಾರ್ಮಿಕರನ್ನು ಲಾಕ್ ಡೌನ್ ಸಂದರ್ಭ ಕಂಪೆನಿಗಳು ಹಾಗೂ ಗುತ್ತಿಗೆದಾರರು ಪೂರ್ಣವಾಗಿ ಕಡೆಗಣಿಸಿದ್ದರು. ದಾನಿಗಳ ಸಹಾಯ ಹೊರತಾದ ಯಾವುದೇ ನೆರವಿಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ಈ ಕಾರ್ಮಿಕರು ವಾರದ ಹಿಂದೆ ಎಮ್ ಆರ್ ಪಿ ಎಲ್ ಮುಂಭಾಗ ಗುಂಪು ಸೇರಿ ಊರಿಗೆ ತಲುಪಿಸುವಂತೆ ಪ್ರತಿಭಟಿಸಿದ್ದರು. ಪ್ರತಿಭಟನೆಯ ದಿನ ಜೋಕಟ್ಟೆಗೆ ಆಗಮಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಲಾ ಐದು ಕಿಲೋ ತೂಕದ ನೂರು ಚೀಲ ಅಕ್ಕಿ ಕಾರ್ಮಿಕರಿಗೆ ನೀಡಿ ಕೈ ತೊಳೆದುಕೊಂಡಿದ್ದರು. ಹೆಚ್ಚಿನ ಕಾರ್ಮಿಕರು ಕೊಳೆತ ಅಕ್ಕಿಯನ್ನು ಎಸೆದಿದ್ದು, ಕೆಲವರು ಹಸಿವು ತಾಳಲಾರದೆ ಅದೇ ಅಕ್ಕಿಯನ್ನು ಬೇಯಿಸಿ ತಿಂದಿದ್ದಾರೆ. ಇನ್ನುಳಿದ ಕಾರ್ಮಿಕರಿಗೆ “ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ” ವತಿಯಿಂದ ತಾತ್ಕಾಲಿಕವಾಗಿ ಆಹಾರ, ವಸತಿಯ ಏರ್ಪಾಡು ಮಾಡಲಾಗಿತ್ತು. ಇಂದು ವಲಸೆ ಕಾರ್ಮಿಕರಿಗೆ ಅಹಾರ ಬಡಿಸುವ ಸಂದರ್ಭ ಕೆಲವು ಕಾರ್ಮಿಕರು ತಮಗೆ ನೀಡಿರುವ ಕೊಳೆತ ಅಕ್ಕಿಯನ್ನು ಸಮಿತಿಯ ಮುಖಂಡರ ಗಮನಕ್ಕೆ ತಂದಿದ್ದಾರೆ. ಆ ಮೂಲಕ ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯ ಅವ್ಯವಸ್ಥೆ, ಅವ್ಯವಹಾರ ಬೆಳಕಿಗೆ ಬಂದಿದೆ.

ಜಿಲ್ಲಾಡಳಿತದ ಕೊರೋನ ನಿಯಂತ್ರಣ, ಪರಿಹಾರ ಕ್ರಮಗಳು ಆರಂಭದಿಂದಲೇ ಅವ್ಯವಸ್ಥೆಯ ಆಗರವಾಗಿದೆ. ಆಹಾರ ಕಿಟ್‌ಗಳ ವಿತರಣೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಇದೀಗ ಜೋಕಟ್ಟೆಯಲ್ಲಿ ಕೊಳೆತ ಅಕ್ಕಿ ಪತ್ತೆಯಾಗಿರುವುದು ಭ್ರಷ್ಟಾಚಾರ, ಅವ್ಯವಹಾರದ ಆರೋಪಗಳನ್ನು ಪುಷ್ಟೀಕರಿಸಿದೆ. ತಕ್ಷಣ ಕೊಳೆತ ಅಕ್ಕಿ ವಿತರಣೆ ಪ್ರಕರಣವನ್ನು ಉನ್ನತ ಅಧಿಕಾರಿಗಳ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿ ದ.ಕ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದೆ ಎಂದು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.


Spread the love