ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ಉಡುಪಿ: ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂಕು ಸಾಕ್ಷರತಾ ಕ್ಲಬ್ಬಿನ ಉದ್ಘಾಟನೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಲತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾನೂನಿನ ಅರಿವು ಮತ್ತು ಅದನ್ನು ಪಾಲಿಸಬೇಕಾದ ಅನಿವಾರ್ಯತೆಯ ಬಗ್ಗೆ ತಿಳಿಸಿ ಹೇಳಿದರು.
ಉಡುಪಿ ವಕೀಲರ ಸಂಘದ ಹಿರಿಯ ವಕೀಲ ಶ್ರೀಶ ಆಚಾರ್ಯ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ವಕೀಲ ಸುದರ್ಶನ್ ರಾಜ್ ಪಿ. ಅವರು ವಿದ್ಯಾರ್ಥಿಗಳಿಗೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದವರು ಶಾಲಾ ಕಾನೂಕು ಸಾಕ್ಷರತಾ ಕ್ಲಬ್ಬಿಗೆ ಕೊಡುಗೆಯಾಗಿ ನೀಡಿದ ಅಲ್ಮೇರಾ, ಟೇಬಲ್, ಕುರ್ಚಿ, ಕಂಪ್ಯೂಟರ್ ಹಾಗೂ ಕಾನೂನು ಮಾಹಿತಿ ಪುಸ್ತಕಗಳನ್ನು ಶಾಲಾ ಮುಖ್ಯ ಶಿಕ್ಷಕಿ ನಿರ್ಮಲ ಬಿ. ಸ್ವೀಕರಿಸಿದರು.
ಆರಂಭದಲ್ಲಿ ಶಿಕ್ಷಕ ಪುಟ್ಟೇಗೌಡ ಸ್ವಾಗತ ಮಾಡಿದರು. ವಿದ್ಯಾರ್ಥಿಗಳಾದ ಮುರುಗೇಶ್, ವಿಘ್ನೇಶ್ ಹಾಗೂ ಶಿಕ್ಷಕಿಯರಾದ ಭಾರತಿ, ರಂಜನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಗೇಂದ್ರ ಪೈ ಧನ್ಯವಾದವಿತ್ತನು.