ವಸತಿ ಸಮುಚ್ಚಯದಲ್ಲಿ ಮಳೆ ನೀರು ಕೊಯ್ಲು ಎಲ್ಲರಿಗೂ ಮಾದರಿ: ಜಿಲ್ಲಾಧಿಕಾರಿ ಜಿ ಜಗದೀಶ್
ಉಡುಪಿ : ಉಡುಪಿ ಜಿಲ್ಲೆಗೆ ಬಹಳ ಅಗತ್ಯವಿರುವಂತಹ ಮಳೆ ನೀರು ಕೊಯ್ಲು ಕಾರ್ಯಕ್ರಮವನ್ನು ಉಡುಪಿಯ ವಸತಿ ಸಮುಚ್ಚಯದಲ್ಲಿ ಮಾಡಿರುವುದು ಮಾದರಿಯ ಕೆಲಸ. ಈ ಕೆಲಸದಿಂದ ಜಿಲ್ಲೆಯ ಇತರ ವಸತಿ ಸಮುಚ್ಚಯಗಳಿಗೆ ಪ್ರೇರಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.
ಬರದ ನಾಡಿನಲ್ಲಿ ನೀರನ್ನು ಚಿನ್ನದಂತೆ ನೋಡಲಾಗುತ್ತಿದ್ದು, ಹನಿ ನೀರನ್ನು ಬಹಳ ಸೂಕ್ಷ್ಮವಾಗಿ ಬಳಸಿಕೊಳ್ಳಲಾಗುತ್ತಿದೆ. ನೀರಿನ ಮಹತ್ವ ಅರಿತು ಈತ್ತೀಚೆಗೆ ಉಡುಪಿಯಲ್ಲಿ ಹರಿಯುವ ನದಿಗೆ ಕಿಂಡಿ ಅಣೆಕಟ್ಟನ್ನು ಕಟ್ಟಿ ನೀರನ್ನು ಶೇಖರಿಸಲಾಗುತ್ತಿದ್ದು, ಮರುಬಳಕೆಗೆ ಸಾಧ್ಯವಾಗುತ್ತಿದೆ. ಮಳೆ ಕೊಯ್ಲಿನಂತಹ ಕಾರ್ಯಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು. ಇಂತಹ ಸಮಾಜಮುಖಿ ಕಾರ್ಯಗಳಿಗೆ ಜಿಲ್ಲಾಡಳಿತ ಎಂದಿಗೂ ಜೊತೆಯಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.
ಕೊಳವೆ ಬಾವಿಗೆ ಜಲ ಮರುಪೂರಣ ಘಟಕದ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲ್ಲೋತ್, ಜಿಲ್ಲೆಯಲ್ಲಿ ಪ್ರತೀ ವರ್ಷ 4 ಸಾವಿರ ಎಮ್.ಎಮ್ ಗಿಂತ ಹೆಚ್ಚಾಗಿ ಮಳೆ ಸುರಿಯುತ್ತಿದೆ. ಆದರೂ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಕಂಡು ಬರುತ್ತಿದೆ. ಆದ್ದರಿಂದ ನೀರನ್ನು ಸಂರಕ್ಷಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದ್ದು, ಎಲ್ಲರೂ ನೀರನ್ನು ಸಂರಕ್ಷಿಸುವ ಕೆಲಸಕ್ಕೆ ಕೈ ಜೋಡಿಸಬೇಕು. ತೆರೆದ ಬಾವಿ ಹಾಗೂ ಕೊಳವೆ ಬಾವಿ ಜಲ ಪೂರಣ ಕಾರ್ಯಕ್ರಮವು ಎಲ್ಲರಿಗೂ ಮಾರ್ಗದರ್ಶಕವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಉಡುಪಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮತ್ತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ರಾಜ್, ಮಳೆ ನೀರಿನೊಂದಿಗೆ ಅನುಸಂಧಾನ, ಜಲ ಜಾಗೃತಿ-ಜಲ ಸಂರಕ್ಷಣೆ-ಜಲ ಮರು ಪೂರಣ ಲೋಗೋ ಬಿಡುಗಡೆ ಮಾಡಿದರು.
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಜಲ ಸಂರಕ್ಷಣೆ ಕುರಿತ ಕರಪತ್ರ ಬಿಡುಗಡೆಗೊಳಿಸಿದರು.
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಜೋಸೆಫ್ ಜಿ.ಎಮ್ ರೆಬೆಲ್ಲೊ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವಸತಿ ಸಮುಚ್ಛಯದಲ್ಲಿ ಮಳೆಗಾಲದಲ್ಲಿ ಟೆರೇಸ್ ಮೇಲೆ ಬಿದ್ದ ಮಳೆ ನೀರನ್ನು ಪೈಪ್‍ಗಳ ಮೂಲಕ ಜಲ್ಲಿ, ಮರಳು ಹಾಗೂ ಸ್ಪಾಂಜ್ ಬಳಸಿ ಸಿಂಟೆಕ್ಸ್‍ನಲ್ಲಿ ಶುದ್ಧೀಕರಿಸಿ, ಬಾವಿ ಹಾಗೂ ಬೋರ್‍ವೆಲ್‍ಗೆ ಶುದ್ಧೀಕರಿಸಿದ ನೀರನ್ನು ಬಿಡುವ ಮೂಲಕ ಅಂತರ್‍ಜಲ ಮಟ್ಟವನ್ನು ಏರಿಸಲಾಗುತ್ತದೆ ಎಂದು ತಿಳಿಸಿದ ಅವರು, ಮಳೆ ನೀರು ಕೊಯ್ಲಿನ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾಯಿ ರಾಧಾ ಎನ್‍ಕ್ಲೇವ್ ಉಡುಪಿ ವಸತಿ ಸಮುಚ್ಚಯದ ಅಧ್ಯಕ್ಷ ಎನ್ ಕೃಷ್ಣಸ್ವಾಮಿ ಭಟ್, ಕೋಶಾಧಿಕಾರಿ ಸತೀಶ್ ಭಟ್, ಲಯನ್ಸ್ ಕ್ಲಬ್‍ನ ಜಿಲ್ಲಾ ಗವರ್ನರ್ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮವನ್ನು ವಸತಿ ಸಮುಚ್ಚಯದ ಕಾರ್ಯದರ್ಶಿ ಜಗದೀಶ್ ಕುಮಾರ್ ನಿರೂಪಿಸಿದರು. ಜೋಸೆಫ್ ಜಿ.ಎಮ್ ರೆಬೆಲ್ಲೊ ವಂದಿಸಿದರು.