ವಾಜಪೇಯಿ ನಿಧನ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟ; ಸಚಿವೆ ಡಾ. ಜಯಮಾಲ

Spread the love

ವಾಜಪೇಯಿ ನಿಧನ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟ; ಸಚಿವೆ ಡಾ. ಜಯಮಾಲ

ಉಡುಪಿ: ನಮ್ಮ ರಾಷ್ಟ್ರವು ಕಂಡ ಅತ್ಯಂತ ಶ್ರೇಷ್ಠ ಮುತ್ಸದ್ದಿ ಹಾಗೂ ಅಜಾತ ಶತ್ರುವೆಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ರಾಷ್ಟ್ರ ರಾಜಕಾರಣದಲ್ಲಿನ ಧ್ರುವತಾರೆಯೊಂದು ಅಸ್ತಂಗತವಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ ಜಯಮಾಲ ಅವರು ವಾಜಪೇಯಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸವು ವಾಜಪೇಯಿ ಅವರ ಉಲ್ಲೇಖವಿಲ್ಲದೆ ಪೂರ್ಣಗೊಳ್ಳುವುದಿಲ್ಲ ಏಕೆಂದರೆ ಅವರದ್ದು ಬಹುಮುಖ ವ್ಯಕ್ತಿತ್ವವಾಗಿತ್ತು. ವಿದೇಶಾಂಗ ಸಚಿವರಾಗಿ, ಪ್ರಧಾನಮಂತ್ರಿಯಾಗಿ, ವಿರೋಧ ಪಕ್ಷದ ಮುಖಂಡರಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯರಾಗಿದ್ದು, ಇಡೀ ದೇಶದಲ್ಲೇ ಅವರು ವಿಶಿಷ್ಟ ಛಾಪು ಮೂಡಿಸಿದ್ದರು. ಹಲವರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಜನಮಾಸದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ.

ಸ್ವತಃ ಕವಿಗಳಾಗಿದ್ದ ವಾಜಪೇಯಿಯವರು ಲೋಕಸಭೆಯಲ್ಲಿ ಮಾತಿಗೆ ನಿಂತರೆ ವಿರೋಧ ಪಕ್ಷದವರೂ ಸಹ ತಲೆದೂಗುತ್ತಿದ್ದರು. ಅಂತಹ ಶ್ರೇಷ್ಠ ವಾಕ್ಪಟುಗಳಾಗಿದ್ದ ವಾಜಪೇಯಿವರು ಸೋತಾಗ ಕುಗ್ಗದೆ ಗೆದ್ದಾಗ ಬೀಗದೆ ಸಮದರ್ಶಿ ನಿಲುವನ್ನು ಹೊಂದಿದ್ದ ಅವರು ಭಾರತರತ್ನ ಪದ್ಮವಿಭೂಷಣಗಳಂತಹ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಅವರ ನಿಧನದ ಸುದ್ದಿ ತಿಳಿದು ತನಗೆ ಅತೀವ ದುಃಖವಾಗಿದ್ದು, ಇಂತಹ ಅಪರೂಪದ ನಾಯಕರ ಅಗಲಿಕೆಯಿಂದ ನಮ್ಮ ರಾಷ್ಟ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಅವರ ಅಪಾರ ಅಭಿಮಾನಿಗಳಿಗೆ, ಕುಟುಂಬದವರಿಗೆ, ಬಂಧು -ಭಾಂಧವರಿಗೆ ಆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಹಾಗೂ ವಾಜಪೇಯಿ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ಜಯಮಾಲಾ ಪ್ರಾರ್ಥಿಸಿದ್ದಾರೆ.


Spread the love