ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ತರಬೇತಿ ಶಿಬಿರದ ಸಮಾರೋಪ
ಮ0ಗಳೂರು :- ಉಡುಪಿ, ದ.ಕ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ವಿಭಾಗ ಮಟ್ಟದ ವಿಷಯಾಧಾರಿತ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಎಸ್.ಎಮ್. ಕುಶೆ ಪದವಿ ಪೂರ್ವ ಕಾಲೇಜು ಅತ್ತಾವರ ಇಲ್ಲಿ ನಡೆಯಿತು. ಜೂನ್ 18 ರಂದು ಆರಂಭಗೊಂಡು 7 ದಿನಗಳ ಕಾಲ ತರಬೇತಿ ನಡೆಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಇಲ್ಲಿನ ಪ್ರತಿನಿಧಿಯಾಗಿ ಆಗಮಿಸಿದ ಶಾಖಾಧಿಕಾರಿ ಆನಂದ ಅವರು ಪಠ್ಯಕ್ರಮದ ಅಭ್ಯಾಸವು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಆತ್ಮಸ್ಥೈರ್ಯವನ್ನು ನೀಡುವುದು. ಅದೇ ರೀತಿ ಉಪನ್ಯಾಸಕರು ತರಬೇತಿಯಿಂದ ಗಳಿಸಿದ ಜ್ಞಾನಾನುಭವವನ್ನು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಬಳಸಬೇಕೆಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಇಲಾಖೆಯು ಕಲಾ ಹಾಗೂ ವಿಜ್ಞಾನ ವಿಷಯಗಳಿಗೂ ಕಾರ್ಯಾಗಾರ ನಡೆಸುವ ತಯಾರಿ ನಡೆಸುತ್ತಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಸ್.ಎಂ. ಕುಶೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಕೆ. ಉಪಾಧ್ಯಾಯರು ಸಂಧರ್ಭೋಚಿತವಾಗಿ ಮಾತನಾಡಿದರು. ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪನ್ಯಾಸಕರುಗಳಾದ ಸುಮತಿ ಚಿಕ್ಕಮಗಳೂರು, ಸಂಜೀವ ಕೋಟ ಪಿ.ಯು. ಕಾಲೇಜು ಹಾಗೂ ಚಂದ್ರಶೇಖರ್ ರಾಮಕುಂಜ ಪಿ.ಯು. ಕಾಲೇಜು ಇವರುಗಳು ಕಾರ್ಯಾಗಾರದ ಅನುಭವಗಳನ್ನು ಹಂಚಿಕೊಂಡರು.
ರಾಜ್ಯ ಸಂಚಾಲಕ ಯುಸುಫ್ ಇವರು ಏಕಕಾಲದಲ್ಲಿ ರಾಜ್ಯದ ಏಳು ವಿಭಾಗಗಳಲ್ಲಿ ವಾಣಿಜ್ಯ ಉಪನ್ಯಾಸಕರುಗಳಿಗೆ ತರಬೇತಿ ಕಾರ್ಯಕ್ರಮ ನಡೆಸುವ ಮೂಲಕ ಹೊಸ ಪಠ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ಜಾರಿಗೊಳಿಸಲು ಇಲಾಖೆಯು ಕೈಗೊಂಡ ಕ್ರಮವನ್ನು ಶ್ಲಾಘಿಸಿದರು.
ತರಬೇತಿ ಕಾರ್ಯಾಗಾರ ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ. ನಾಗರಾಜಪ್ಪ ಇವರ ಮಾರ್ಗದರ್ಶನದಲ್ಲಿ ನಡೆಯಿತು.