ವಾಲ್ಮೀಕಿ ಮರು ಹುಟ್ಟು ಪಡೆದ ಕವಿ ಮಂದಾರ : ಡಾ.ವೈ.ಭರತ್ ಶೆಟ್ಟಿ
ಮಂಗಳೂರು: ‘ರಾಮಾಯಣವನ್ನು ಬರೆದ ವಾಲ್ಮೀಕಿಯೇ ತುಳುನಾಡಿನಲ್ಲಿ ಮರುಹುಟ್ಟು ಪಡೆದಂತೆ ಹುತ್ತಗಳ ಊರಾದ ಕುಡುಪುವಿನಲ್ಲಿ ಮಂದಾರ ಕೇಶವ ಭಟ್ಟರ ಜನ್ಮವಾಗಿದೆ. ಅವರ ಕೃತಿಯಲ್ಲಿ ತುಳುವರ ಸಂಸ್ಕøತಿ, ಸಂಪ್ರದಾಯ, ಆಚಾರ-ವಿಚಾರಗಳು ಹಾಸುಹೊಕ್ಕಾಗಿ ಬಂದಿದೆ.ಆದ್ದರಿಂದ ಇದು ಎಲ್ಲರ ಮನೆಗಳಲ್ಲೂ ಇರಲೇಬೇಕಾದ ಮಹಾಕಾವ್ಯ’ ಎಂದು ಮಂಗಳೂರು ಉತ್ತರ ವಿಧಾನ ಸಭಾಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುವಲ್ರ್ಡ್(ರಿ)ಕುಡ್ಲ ಆಶ್ರಯದಲ್ಲಿ ತುಳುಭವನದ ಸಿರಿಚಾವಡಿಯಲ್ಲಿ ನಡೆಯುವ ‘ ಏಳದೆ ಮಂದಾರ ರಾಮಾಯಣ : ಸುಗಿಪು –ದುನಿಪು’ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪರರಾಜ್ಯಗಳಲ್ಲಿ ಆಯಾಯ ರಾಜ್ಯದ ಭಾಷಿಗರು ಅವರವರ ಭಾಷೆಯ ಮೇಲೆ ಇಟ್ಟಿರುವ ಶ್ರದ್ದೆಯಂತೆ ತುಳುವರು ಕೂಡಾ ತುಳು ಭಾಷೆಯ ಮೇಲೆ ಇಡಬೇಕಾಗಿದೆ. ತುಳುವಿನಲ್ಲಿ ನಾವು ಅಧ್ಯಯನವನ್ನು ಮಾಡಿದಷ್ಟೆ ನಾವು ತುಳುವಿನಲ್ಲಿ ಮಾತನಾಡಬೇಕು. ಕರಾಡ ಬ್ರಾಹ್ಮಣ ಮರಾಠಿ ಭಾಷಿಗರಾದ ಮಂದಾರ ಕೇಶವ ಭಟ್ಟರಿಗೆ ಸಮ್ರದ್ದ ತುಳು ಸಾಹಿತ್ಯ ಜಗತ್ತಿಗೆ ನೀಡಲು ಸಾಧ್ಯವಾದರೆ ನಮಗ್ಯಾಕೆ ಕಷ್ಟ ? ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‍ಸಾರ್ ಅಧ್ಯಕ್ಷತೆಯನ್ನು ವಹಿಸಿ ನುಡಿದರು.
‘ಶ್ರೀರಾಮಾಯಣದರ್ಶನ ಮತ್ತು ಮಂದಾರ ರಾಮಾಯಣ ತೌಲನಿಕ ಅಧ್ಯಯನ ’ಮಾಡಿ ಡಾಕ್ಟರೇಟ್ ಪಡೆದ ಕನ್ಯಾನ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಶಂಕರ ಭಟ್ ಅವರಿಗೆ ಈ ಸಂದರ್ಭದಲ್ಲಿ ‘ಮಂದಾರ ಸಮ್ಮಾನ್’ ನೀಡಿ ಸಮ್ಮಾನಿಸಲಾಯಿತು. ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ನಿರ್ದೇಶಕ ಡಾ.ಕೆ.ಸಿ.ನಾಯಕ್ ಮತ್ತು ಮಂಗಳೂರು ನಗರಪಾಲಿಕೆಯ ತೆರಿಗೆ,ಹಣಕಾಸು ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಮುಖ್ಯ ಅತಿಥಿಗಳಾಗಿದ್ದರು.
ತುಳುವಲ್ರ್ಡ್(ರಿ) ಕುಡ್ಲ ಅಧ್ಯಕ್ಷ ಡಾ.ರಾಜೇಶ್ ಆಳ್ವ ಬದಿಯಡ್ಕ ಸ್ವಾಗತಿಸಿದರು. ತುಳು ಕಾವ್ಯಯಾನ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಲಾವಿದರನ್ನು ಪರಿಚಯಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದಿನೇಶ್ ರೈ ಕಡಬ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಕಾಡೆಮಿ ಸದಸ್ಯರಾದ ನಾಗೇಶ್ ಕುಲಾಲ್, ಚೇತಕ್ ಪೂಜಾರಿ, ನಿಟ್ಟೆ ಶಶಿಧರ್ ಶೆಟ್ಟಿ, ತುಳುವಲ್ರ್ಡ್ ಸಂಚಾಲಕ ಮಾಧವ ಭಂಡಾರಿ ಉಪಸ್ಥಿತರಿದ್ದರು.
ಮಂದಾರ ರಾಮಾಯಣದ ‘ ಪುಗೆ ತೂಪಿ ಪಗೆ ’ ಅಧ್ಯಾಯವನ್ನು ಧೀರಜ್ ರೈ ಸಂಪಾಜೆ ಮತ್ತು ಭವ್ಯಶ್ರೀ ಕುಲ್ಕುಂದ ವಾಚನ ಮಾಡಿದರು. ರವಿ ಅಲೆವೂರಾಯ ವರ್ಕಾಡಿ ವ್ಯಾಖ್ಯಾನಿಸಿದರು.