Home Mangalorean News Kannada News ವಿಕಲಚೇತನರಿಗೆ ಸೌಲಭ್ಯ : ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ; ಬಸವರಾಜ್

ವಿಕಲಚೇತನರಿಗೆ ಸೌಲಭ್ಯ : ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ; ಬಸವರಾಜ್

Spread the love

ವಿಕಲಚೇತನರಿಗೆ ಸೌಲಭ್ಯ : ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ; ಬಸವರಾಜ್

ಉಡುಪಿ: ವಿಕಲಚೇತನರಿಗೆ ಸರಕಾರದಿಂದ ಲಭ್ಯವಿರುವ ಎಲ್ಲಾ ಯೋಜನೆಗಳ ಸೌಲಭ್ಯಗಳನ್ನು ಒದಗಿಸಿ ಅವರನ್ನು ಸಬಲರನ್ನಾಗಿ ಮಾಡುವಲ್ಲಿ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ, ವ್ಯವಸ್ಥಿತ ರೀತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.

ಅವರು ಬುಧವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಕಲಚೇತನರಿಗೆ ಸೌಲಭ್ಯ ಒದಗಿಸಲು ಎಲ್ಲಾ ಇಲಾಖೆಗಳಲ್ಲಿ ಯೋಜನೆಗಳಿದ್ದು, ಅಧಿಕಾರಿಗಳು ಯೋಜನೆಗಳ ಕುರಿತು ವಿಕಲಚೇತನ ಫಲಾನುಭವಿಗಳಿಗೆ ಅರಿವು ಮೂಡಿಸಬೇಕು, ಎಲ್ಲಾ ಇಲಾಖಾಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಇಲಾಖೆಗಳಲ್ಲಿ ಸಂಪನ್ಮೂಲಗಳಿದ್ದರೂ ಸಹ ಸೌಲಭ್ಯ ಒದಗಿಸುವಲ್ಲಿ ಹಿಂದುಳಿಯಬೇಡಿ, ವಿಕಲಚೇತನರಿಗಾಗಿ ಹೊಸ ಹೊಸ ಯೋಜನೆ ರೂಪಿಸಿ ಅವರಿಗಾಗಿ ಹೇಗೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬಹುದು ಎಂಬುದನ್ನು ಚಿಂತಿಸಿ, ಉಡುಪಿ ಜಿಲ್ಲೆಯು ಇಡೀ ರಾಜ್ಯಕ್ಕೆ ವಿಕಲಚೇತನರ ಅಭಿವೃಧ್ದಿಗಾಗಿ ವಿಶೇಷ ಯೋಜನೆ ರೂಪಿಸಿದ ಮಾದರಿ ಜಿಲ್ಲೆ ಎಂಬಂತೆ ಕರ್ತವ್ಯ ನಿರ್ವಹಿಸಿ ಎಂದು ಬಸವರಾಜ್ ಹೇಳಿದರು.

ಎಲ್ಲಾ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಆದಾಯಲ್ಲಿ ಶೇ.5 ರಷ್ಟನ್ನು ವಿಕಲಚೇತನರ ಅಭಿವೃದ್ದಿಗಾಗಿ ಮೀಸಲಿಡಬೇಕು ಎಂಬ ನಿಯಮವಿದೆ, ಇದನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಿ, ಸೌಲಭ್ಯಗಳನ್ನು ಒದಗಿಸಿ, ಅವರಿಗೆ ಹೆಚ್ಚು ಹೆಚ್ಚು ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ವಾವಲಂಬಿಗಳನ್ನಾಗಿ ಮಾಡಿ, ವಿಕಲಚೇತನ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪೋಷಣಾ ಭತ್ಯೆ ನೀಡುವುದರ ಜೊತೆಗೆ ಮನೆಯಿಂದ ಶಾಲೆಗೆ ತೆರಳಲು ಅಗತ್ಯ ವಾಹನ ಸೌಲಭ್ಯಗಳನ್ನು ಒದಗಿಸಿ, ಇದಕ್ಕಾಗಿ ತಮ್ಮಲ್ಲಿನ ವಿಕಲಚೇತನ ನಿಧಿಯನ್ನು ಬಳಸಿ, ಶಾಲೆಯಲ್ಲಿ ಅವರಿಗೆ ಕಲಿಯಲು ಅಗತ್ಯ ಮೂಲ ಸೌಲಭ್ಯ ಒದಗಿಸಿ, ಹೆಚ್ಚಿನ ಕಾಳಜಿ ವಹಿಸುವಂತೆ, ಅವರ ಪೋಷಕರಿಗೂ ಸಹ ವಿಶೇಷ ತರಬೇತಿಗೆ ವ್ಯವಸ್ಥೆ ಮಾಡಿ ಎಂದು ಆಯುಕ್ತರು ಹೇಳಿದರು.

ಜಿಲ್ಲೆಯ ಎಲ್ಲಾ ಇಲಾಖಾಧಿಕಾರಿಗಳಿಗೆ ವಿಕಲಚೇತನ ಅಭಿವೃಧ್ದಿಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಪ್ರತ್ಯೇಕ ಸಭೆ ನಡೆಸಿ, ಸೂಕ್ತ ನಿರ್ದೇಶನ ನೀಡುವುದಾಗಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯಲ್ಲಿ ವಿಕಲಚೇತನರ ವೃತ್ತಿ ತರಬೇತಿ ಸಂಸ್ಥೆ ಪ್ರಾರಂಭಿಸುವ ಬಗ್ಗೆ, ವಿಕಲಚೇತನರು ತಯಾರಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಬಗ್ಗೆ, ಬಿಟ್ಟು ಹೋಗಿರುವ ಎಂಡೋ ಸಲ್ಫಾನ್ ಪೀಡಿತರನ್ನು ಗುರುತಿಸಿ, ಸೌಲಭ್ಯ ಒದಗಿಸುವ ಕುರಿತಂತೆ ಚರ್ಚೆ ನಡೆಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್, ಎ ಎಸ್ಪಿ ಕುಮಾರ ಚಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್, ಅಂಗವಿಲಕರ ಅಧಿನಿಯಮದ ಉಪ ಆಯುಕ್ತ, ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಮತ್ತು ವಿಕಲಚೇತನ ಶಾಲೆಗಳ ಪ್ರತಿನಿಧಿಗಳು, ವಿಕಲಚೇತನ ಸ್ವಯಂ ಸೇವಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಸ್ವಾಗತಿಸಿದರು.


Spread the love

Exit mobile version