ವಿಕ್ರಂ ಗೌಡ ಎನ್ ಕೌಂಟರ್ ನಕಲಿ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Spread the love

ವಿಕ್ರಂ ಗೌಡ ಎನ್ ಕೌಂಟರ್ ನಕಲಿ ಅಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ನಕಲಿ ಅಲ್ಲ. ಎನ್ಕೌಂಟರ್ ನಕಲಿ ಎಂದು ಅನುಮಾನ ಪಡುವುದು ಬೇಡ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.

ಉಡುಪಿಯ ಗೃಹ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಚಿವರು, ಎನ್ ಕೌಂಟರ್ ಕುರಿತು ನ್ಯಾಯಾಂಗ ತನಿಖೆಯ ಅವಶ್ಯಕತೆ ಇಲ್ಲ. ಅಗತ್ಯವಿದ್ದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ನಕ್ಸಲೇಟ್ ಗಳನ್ನು ಕಟ್ಟಿ ಹಾಕಬೇಕು ಎಂಬುದು ಸರ್ಕಾರದ ನಿರ್ಧಾರ. ಕೂಂಬಿಂಗ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಕ್ರಂ ಗೌಡ ಬಳಿ ಕೂಡ ಶಸ್ತ್ರಾಸ್ತ್ರಗಳು ಇದ್ದವು. ವಿಕ್ರಂ ಗೌಡ ಒಂದು ಬಾರಿ ಫೈರಿಂಗ್ ಮಾಡಿದ್ದರಿಂದ ಪ್ರತಿ ದಾಳಿ ಮಾಡದಿದ್ದರೆ ಪೊಲೀಸರ ಜೀವಕ್ಕೆ ಹಾನಿ ಆಗುತ್ತಿತ್ತು ಎಂದರು.

ನಕ್ಸಲೈಟನ್ನು ಬೇರು ಸಮೇತ ಕಿತ್ತು ಹಾಕಬೇಕು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಿಲುವು. ಪರ ವಿರೋಧ ಚರ್ಚೆ ಎಲ್ಲಾ ಸಂದರ್ಭದಲ್ಲಿ ಇರುತ್ತದೆ. ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆ. ಸಂಶಯ ಇದ್ದವರಿಗೆ ನಾವು ಮತ್ತೆ ಸ್ಪಷ್ಟನೆ ಕೊಡಲು ತಯಾರಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತ ಇಲ್ಲ. ಭಿನ್ನಮತ ಇರೋದು ಬಿಜೆಪಿಯಲ್ಲಿ ಮಾತ್ರ. ಬಿಜೆಪಿ ಭಿನ್ನಮತದ ಬಗ್ಗೆ ಮಾಧ್ಯಮಗಳೇ ದಿನಾ ತೋರಿಸುತ್ತಿವೆ. ನಮ್ಮಲ್ಲಿ ಭಿನ್ನಮತ ಇಲ್ಲ ಅನ್ನೋದಕ್ಕೆ ಉಪಚುನಾವಣೆಯ ಫಲಿತಾಂಶವೇ ಉತ್ತರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ವಿಕಲಾಂಗ ಚೇತನ ಹಾಗೂ ಹಿರಿಯ ನಾಗರೀಕ ಇಲಾಖೆಯ ಅನುದಾನ ಕಡಿತ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಇಲಾಖೆ 32 ಸಾವಿರ ಕೋಟಿಗಿಂತ ಹೆಚ್ಚಿನ ಗಾತ್ರದ ಬಜೆಟ್ ಹೊಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಾಂಗ ಚೇತನ ಯಾವುದೇ ಅನುದಾನವನ್ನು ನಾವು ಕಡಿತ ಮಾಡುವುದಿಲ್ಲ ಎಂದರು.

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಾನು ಮತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಬಳ್ಳಾರಿ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

ಬಳ್ಳಾರಿಗೆ ಭೇಟಿ ಕೊಟ್ಟಿಲ್ಲ ಎಂದರೆ, ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದ್ದೇವೆ ಎಂದಲ್ಲ. ಸರ್ಕಾರಕ್ಕೆ ಮತ್ತು ಮಂತ್ರಿಗಳಿಗೆ ಬಹಳ ಜವಾಬ್ದಾರಿ ಇದೆ. ತಪ್ಪಿತಸ್ಥರ ವಿರುದ್ಧ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಕಾಂಗ್ರೆಸ್ ನಲ್ಲಿ ಇಲ್ಲ. ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಚರ್ಚೆ ಇತ್ತು. ಸಂಪುಟ ವಿಸ್ತರಣೆ ನಿಜಾನಾ ಸುಳ್ಳ ಅಂತ ನೀವೇ (ಮಾಧ್ಯಮದವರು) ಸ್ಪಷ್ಟಪಡಿಸಬೇಕು. ಯಾರನ್ನು ತೆಗಿತೀರಾ? ಯಾರನ್ನು ಕೂರಿಸ್ತೀರಾ?ಹೊಸದಾಗಿ ಪ್ರಮಾಣವಚನ ಎಂದು ಹೇಳುತ್ತೀರಿ. ಈ ಚರ್ಚೆಗೆ ಮಾಧ್ಯಮಗಳೇ ಸ್ಪಷ್ಟನೆಯನ್ನು ಕೊಡಬೇಕು. ವಿರೋಧ ಪಕ್ಷದ ಒಳಗಿನ ಗಲಾಟೆ ನಮಗೆ ಅನುಕೂಲವಾಗುತ್ತದೆ ಎಂದರು.

ರಾಜ್ಯದಲ್ಲಿ ಅಂಗನವಾಡಿಗೆ 50 ವರ್ಷದ ಇತಿಹಾಸವಿದೆ. 70 ಸಾವಿರ ಅಂಗನವಾಡಿಯಲ್ಲಿ 35 ಲಕ್ಷ ಮಕ್ಕಳ ಪಾಲನೆ ಮಾಡಲಾಗುತ್ತದೆ. ಅಂಗನವಾಡಿಗಳಲ್ಲಿ ಕಳಪೆ ಅಕ್ಕಿ ವಿತರಣೆ, ಆಹಾರ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದರು.


Spread the love
Subscribe
Notify of

0 Comments
Inline Feedbacks
View all comments