ವಿಚಿತ್ರ ಆದ್ರೂ ಸತ್ಯ: ಮಾಸ್ಕ್ ಧರಿಸದಕ್ಕೆ ಆಡುಗಳನ್ನು ಬಂಧಿಸಿದ ಉತ್ತರ ಪ್ರದೇಶದ ಪೊಲೀಸರು
ಲಕ್ನೋ: ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಆಡುಗಳನ್ನು ಬಂಧಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಬೇಕನಗಂಜ್ ಪ್ರದೇಶದಲ್ಲಿ ಮೇಯುತ್ತಿದ್ದ ಆಡುಗಳನ್ನ ಪೊಲೀಸರು ತಮ್ಮ ವಾಹನದಲ್ಲಿ ಹಾಕಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಪೊಲೀಸರು ಆಡುಗಳನ್ನು ಬಂಧಿಸಿರುವ ವಿಷಯ ತಿಳಿದ ಮಾಲೀಕ ಠಾಣೆಗೆ ಆಗಮಿಸಿದ್ದಾನೆ. ಇನ್ಮುಂದೆ ಆಡುಗಳನ್ನು ರಸ್ತೆಗೆ ಬಿಡುವುದಿಲ್ಲ. ದಯವಿಟ್ಟು ನನ್ನ ಸಾಕು ಪ್ರಾಣಿಗಳನ್ನು ಬಿಡುಗಡೆಗೊಳಿಸಬೇಕೆಂದು ಮಾಲೀಕ ಮನವಿ ಮಾಡಿಕೊಂಡಿದ್ದಾನೆ. ಬಳಿಕ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಸೈಫುದ್ದೀನ್ ಬೇಗ್, ಆಡುಗಳನ್ನು ಮೇಯಿಸುತ್ತಿದ್ದ ಯುವಕ ಮಾಸ್ಕ್ ಧರಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ನಮ್ಮನ್ನು ನೋಡಿದ ಕೂಡಲೇ ಆಡುಗಳನ್ನು ಮೇಯಿಸುತ್ತಿದ್ದ ಮಾಸ್ಕ್ ಧರಿಸದ ಯುವಕ ಪರಾರಿಯಾದನು. ಹಾಗಾಗಿ ಆಡುಗಳನ್ನು ಠಾಣೆಗೆ ತರಲಾಯ್ತು. ನಂತರ ಠಾಣೆಗೆ ಬಂದ ಮಾಲೀಕನಿಗೆ ಆಡುಗಳನ್ನು ಹಸ್ತಾಂತರಿಸಲಾಯ್ತು ಎಂದು ಸೈಫುದ್ದೀನ್ ಬೇಗ್ ಹೇಳಿದ್ದಾರೆ.
ಆಡುಗಳನ್ನು ಕರೆತಂದ ಒರ್ವ ಪೊಲೀಸ್, ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಬಂಧಿಸಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಜನರು ತಮ್ಮ ಸಾಕು ನಾಯಿಗಳಿಗೆ ಮಾಸ್ಕ್ ಹಾಕುತ್ತಿದ್ದಾರೆ. ಅದೇ ರೀತಿ ಆಡುಗಳಿಗೂ ಮಾಸ್ಕ್ ಹಾಕಬೇಕು ಎಂದಿದ್ದಾರೆ. ಇನ್ನು ಆಡುಗಳ ಬಂಧನದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗಳಿಗೆ ಮುನ್ನುಡಿ ಬರೆದಿದೆ.