ಈ.ಡಿ. ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ
ವಿಟ್ಲ: ಬೋಳಂತೂರು ನಾರ್ಶ ಎಂಬಲ್ಲಿ ಉದ್ಯಮಿಯೊಬ್ಬರ ಮನೆಗೆ ಈ.ಡಿ. ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 30 ಲಕ್ಷ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಮನೆಯ ಮಾಹಿತಿ ನೀಡಿದ್ದ ಕೊಳ್ನಾಡು ನಿವಾಸಿ ಸಿರಾಜುದ್ದೀನ್ (37) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿ, ಆತ ನೀಡಿದ ಮಾಹಿತಿಯ ಅಧಾರದಲ್ಲಿ ಬಂಟ್ವಾಳ ನಿವಾಸಿ ಇಕ್ಬಾಲ್ (38), ಮಂಗಳೂರು ಪಡೀಲ್ ನಿವಾಸಿ ಅನ್ಸಾರ್ (27) ಎಂಬವರನ್ನು ಬಂಧಿಸಲಾಗಿದೆ.
ಪ್ರಕರಣದ ತನಿಖೆ ಮುಂದುವರಿದಂತೆ, ದರೋಡೆ ಕೃತ್ಯಕ್ಕೆ ಮೂಲ ಸೂತ್ರದಾರನಾದ ಕೇರಳದ ಶಫೀರ್ ಬಾಬು (48) ಎಂಬಾತನನ್ನು ಬಂಧಿಸಿದ್ದು, ಈತ ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖಾ ತಂಡವು ಈಗಾಗಲೇ ಕೇರಳ ಕೊಲ್ಲಂ ನಿವಾಸಿಗಳಾದ ಅನಿಲ್ ಫರ್ನಾಂಡಿಸ್ (49), ಸಚ್ಚಿನ್ ಟಿ ಎಸ್ (29) ಹಾಗೂ ಶಬಿನ್ ಎಸ್ (27) ಎಂಬವರನ್ನು ಬಂಧಿಸಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಜಿಲ್ಲಾ ವ್ಯಾಪ್ತಿಯ ಠಾಣೆಗಳಿಂದ ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿರುತ್ತದೆ.