ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಿ – ಆಲ್ವಿನ್ ಕ್ವಾಡ್ರಸ್
ಉಡುಪಿ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ರೋಟರಿ ಜಿಲ್ಲೆ 3182 ವಲಯ 3 ರ ಸಹಾಯಕ ಗವರ್ನರ್ ಆಲ್ವಿನ್ ಕ್ವಾಡ್ರಸ್ ಹೇಳಿದರು.
ಅವರು ಅಂಬಾಗಿಲು ಅನುಗ್ರಹ ಪಾಲನಾ ಕೇಂದ್ರದಲ್ಲಿ ದಿವಂಗತ ತೆರೆಸಾ ಕರ್ನೆಲಿಯೋ ಮತ್ತು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಜಂಟಿ ಆಶ್ರಯದಲ್ಲಿ ದಿ. ತೆರೆಸಾ ಕರ್ನೆಲಿಯೋ, ದಿ. ಜೇಮ್ಸ್ ಲೋಬೊ ಮಂಗಳೂರು ಮತ್ತು ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪೋಷಕರು ಮಕ್ಕಳಿಗೆ ಅವರ ಮುಂದಿನ ಗುರಿಯ ಆಯ್ಕೆಗಾಗಿ ಒತ್ತಡವನ್ನು ಹೇರದೆ ಸ್ವಂತವಾಗಿ ಆಯ್ಕೆಯನ್ನು ಮಾಡಲು ಪ್ರೋತ್ಸಾಹಿಸಬೇಕು ಈ ಮೂಲಕ ವಿದ್ಯಾರ್ಥಿಗಳು ಉತ್ತಮ ಹುದ್ದೆಗೆ ಹೋಗಲು ಸಾಧ್ಯವಾಗುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಮಾತನಾಡಿ ನಮ್ಮ ಸಮುದಾಯದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ತಲುಪುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನದ ಮೂಲಕ ಸಹಾಯ ಮಾಡಲು ಇಂದು ಹಲವು ಮಂದಿ ದಾನಿಗಳು ಮುಂದೆ ಬರುತ್ತಾರೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಿ. ತೆರೆಸಾ ಕರ್ನೆಲಿಯೊ ಮತ್ತು ದಿ. ಜೇಮ್ಸ್ ಲೋಬೊ ಮಂಗಳೂರು ಕುಟುಂಬದ ವತಿಯಿಂದ 30 ವಿದ್ಯಾರ್ಥಿಗಳಿಗೆ ಹಾಗೂ ಕಥೊಲಿಕ್ ಸಭಾ ಉಡುಪ ಪ್ರದೇಶ ವತಿಯಿಂದ 12 ವಿದ್ಯಾರ್ಥಿಗಳು ಒಟ್ಟು ರೂ. 4.2 ಲಕ್ಷ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು,
ಕಾರ್ಯಕ್ರಮದಲ್ಲಿ ಲಿಗೋರಿ ಡಿಸೋಜಾ ಸಂತೆಕಟ್ಟೆ, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಡಾ|ಜೆರಾಲ್ಡ್ ಪಿಂಟೊ ಸ್ವಾಗತಿಸಿ ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ವಂದಿಸಿದರು.