ವಿದ್ಯಾರ್ಥಿಗಳ ನಡೆ ರೈತರ ಹಡೀಲು ಭೂಮಿಯ ಕಡೆ ; ನೇಜಿ ನೆಟ್ಟ ಯು.ಟಿ.ಖಾದರ್
ಮಂಗಳೂರು: ಬರಡು ಭೂಮಿಯಾಗಿದ್ದ ಗದ್ದೆಯಲ್ಲಿ ಫಸಲು ತೆಗೆಯುವ ಹಂಬಲಕ್ಕೆ ರಾಜ್ಯದ ಆಹಾರ ಸಚಿವರ ಸಹಕಾರದಿಂದ ಬರಡು ಭೂಮಿಯಾಗಿದ್ದ ಕೊಣಾಜೆ ಸಮೀಪದ ಪುರಷರ ಕೋಡಿಯ ಗದ್ದೆಯಲ್ಲಿ ಹಸಿರನ್ನು ನಳನಳಿಸುವುದರೊಂದಿಗೆ ಭತ್ತ ಬೆಳೆಯುವ ಹೊಸ ಸಂಕಲ್ಪಕ್ಕೆ ಸಾಕ್ಷಿಯಾಯಿತು.
ಸಪ್ಟೆಂಬರ್ 17 ರಂದು ಭಾನುವಾರ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು, ಸ್ಥಳೀಯ ಶಾಸಕರೂ ಆದ ಯು.ಟಿ.ಖಾದರ್ ಸ್ವತಃ ಕೆಸರಿನಗದ್ದೆ ಇಳಿದು ವಿದ್ಯಾರ್ಥಿ ಸಮೂಹದೊಂದಿಗೆ ನೇಜಿ ನಾಟಿ ಮಾಡಿ ಸ್ಪೂರ್ತಿಯಾದರು. ಸಚಿವರು ನಾಟಿ ಮಾಡುತ್ತಿದ್ದಂತೆ 72ರ ಹರೆಯದ ಮಹಿಳೆ, ಮುತ್ತಕ್ಕ ಶೆಟ್ಟಿ ಪಾಡ್ದನ ಹಾಡಿ ಗದ್ದೆ ನಾಟಿಗೆ ಮೆರುಗು ತಂದರು.
ಮಂಗಳೂರು ರಥಬೀದಿಯ ಡಾ.ಪಿ.ದಯಾನಂದ ಪೈ, ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ರೆಡ್ ರಿಬ್ಬನ್, ಕೊಣಾಜೆ ಗ್ರಾ.ಪಂ., ದ.ಕ. ರೈತಸಂಘ ಹಸಿರುಸೇನೆ ಹಾಗೂ ತೊಕ್ಕೊಟ್ಟು ಮಾಧ್ಯಮ ಕೇಂದ್ರದ ಸಹಯೋಗದಲ್ಲಿ “ವಿದ್ಯಾರ್ಥಿಗಳ ನಡಿಗೆ ರೈತರ ಹಡೀಲು ಭೂಮಿಯ ಕಡೆಗೆ” ಹಾಗೂ ಕೊಣಾಜೆ ಗ್ರಾಮದ ಎರಡನೇ ವಾರ್ಡು ದತ್ತು ಸ್ವೀಕಾರ ಸಮಾರಂಭದ ಸಮಾರೋಪದ ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್ ನೇಜಿ ನೆಟ್ಟು ಎಲ್ಲರ ಗಮನ ಸೆಳೆದರು.
ಇದೇ ವೇಳೆ ಮಾತನಾಡಿದ ಸಚಿವ ಖಾದರ್ ಅವರು ತಂತ್ರಜ್ಞಾನದ ಯುಗದಲ್ಲಿ ಇರುವ ವಿದ್ಯಾರ್ಥಿಗಳು ಮತ್ತು ಯುವಜನರು ಕೃಷಿಯತ್ತ ಆಕರ್ಷಿತರಾಗುತ್ತಿರುವುದು ಸಮಾಜದಲ್ಲಿ ಉತ್ತಮ ಬೆಳವಣಿಗೆ. ರೈತರ ಹಡಿಲು ಭೂಮಿಯನ್ನು ಹುಡುಕಿ ಕೃಷಿ ಮಾಡುತ್ತಿರುವ ಪ್ರಯತ್ನ ಅಭಿನಂದನಾರ್ಹ ಎಂದರು.
ಈ ಸಂದರ್ಭ ಕೊಣಾಜೆ ಗ್ರಾ.ಪಂ. ಅಧ್ಯಕ್ಷ ಶೌಕತ್ ಅಲಿ, ತಾ.ಪಂ. ಸದಸ್ಯೆ ಪದ್ಮಾವತಿ, ಶಿಕ್ಷಕ ರವೀಂದ್ರ ರೈ, ರಹಿಮಾನ್ ಕೋಡಿಜಾಲ್, ಪದ್ಮನಾಭ ಪೂಜಾರಿ, ಪದ್ಮನಾಭ ಗಟ್ಟಿ, ಅಚ್ಯುತ ಗಟ್ಟಿ, ತಾ.ಪಂ. ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಕಿನ್ಯ ಗ್ರಾ.ಪಂ. ಉಪಾಧ್ಯಕ್ಷ ಸಿರಾಜ್ ಕಿನ್ಯ ಉಪಸ್ಥಿತರಿದ್ದರು.