ವಿದ್ಯಾರ್ಥಿಗಳ ಶಕ್ತಿಯೇ ನಿಜವಾದ ರಾಷ್ಟ್ರಶಕ್ತಿ: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ದೇಶದ ಪ್ರಜಾಪ್ರಭುತ್ವದ ಸ್ಪರೂಪ ಬದಲಾವಣೆಗೆ ವಿದ್ಯಾರ್ಥಿಗಳ ಕೊಡುಗೆ ಅಪಾರ. ವಿದ್ಯಾರ್ಥಿಗಳ ಶಕ್ತಿಯೇ ನಿಜವಾದ ರಾಷ್ಟ್ರ ಶಕ್ತಿ. ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ವಿದ್ಯಾರ್ಥಿಗಳಾಗಿದ್ದವರೇ ನಾಯಕರಾಗಿ ರಾರಾಜಿಸಿದ ಇತಿಹಾಸವೂ ನಮ್ಮ ಕಣ್ಣ ಮುಂದಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ನಾಯಕತ್ವ ಗುಣ, ವೃತ್ತಿಪರ ಜ್ಞಾನ ಹಾಗೂ ಸಾಮಥ್ರ್ಯವನ್ನು ಬೆಳೆಸಿಕೊಂಡರೆ ಮುಂದಿನ ಜನನಾಯಕರಾಗಿ ಬೆಳೆಯಲು ಸಾಧ್ಯ ಎಂದರು.
ನಾಯಕರು ಕೇವಲ ರಾಜಕೀಯ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿರದೇ, ಎಲ್ಲಾ ಕ್ಷೇತ್ರಗಳಿಗೂ ನಾಯಕರ ಅಗತ್ಯ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ವೃತ್ತಿಪರತೆ, ಸಾಮಾನ್ಯ ಜ್ಞಾನ, ಉನ್ನತ ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾರ್ಥಿ ಬದುಕಿನಲ್ಲೇ ನಾಯಕತ್ವ ಗುಣವನ್ನು ಪ್ರದರ್ಶಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ ಭಟ್, ವಿದ್ಯಾರ್ಥಿಗಳು ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿವೇಕವನ್ನು ಹೊಂದಿರಬೇಕು. ನಾಯಕನಿಗೆ ಹಿಂಬಾಲಕರು ಬೆಂಬಲ ನೀಡುವ ವೇಳೆ ಸಾಕಷ್ಟು ಆಲೋಚನೆ ನಡೆಸಿ, ಅವರ ಸಾಮಥ್ರ್ಯ ಮತ್ತು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕಿದೆ. ಕೇವಲ ಉದ್ಯೋಗ ದೃಷ್ಟಿಯಿಂದ ಮಾತ್ರವೇ ಕಲಿಕಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ, ಸ್ವಪ್ರೇರಣೆ, ನಿರಂತರ ಪರಿಶ್ರಮ, ಮಹತ್ವಕಾಂಕ್ಷೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕಿನ ವಿಕಾಸದ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಎಲ್. ಧರ್ಮ, ಬದುಕಿನಲ್ಲಿ ಸವಾಲುಗಳು ಎದುರಾದಾಗ ಕೇವಲ ನಕಾರಾತ್ಮಕವಾಗಿ ಚಿಂತಿಸದೇ ಸಕಾರಾತ್ಮಕವಾಗಿ ಆಲೋಚನೆ ಮಾಡುವ ಮೂಲಕ ಪ್ರಗತಿಯೆಡೆಗೆ ಹೆಜ್ಜೆ ಹಾಕಬೇಕಿದೆ. ಸಮಾನತೆ, ಸಹಬಾಳ್ವೆಯ ಕಡೆಗೆ ಗಮನಹರಿಸಿ ವಿದ್ಯಾರ್ಜನೆ ವೇಳೆ ಶ್ರದ್ದೆ, ಹಾಗೂ ಶಿಸ್ತುಬದ್ಧವಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎನ್, ವಿದ್ಯಾರ್ಥಿ ಪರಿಷತ್ತಿನ ಉಪನಿರ್ದೇಶಕ ಪ್ರೊ. ಜಯವಂತ ನಾಯಕ್, ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಸಾತ್ವಿಕ್, ಕಾರ್ಯದರ್ಶಿ ಕೀರ್ತನ್, ಸಹಕಾರ್ಯದರ್ಶಿ ನಂದಿತಾ ಎಸ್, ಲಲಿತಕಲಾ ಸಂಘದ ಕಾರ್ಯದರ್ಶಿ ಪೂಜಾ ಶೆಟ್ಟಿ, ಸಹಕಾರ್ಯದರ್ಶಿ ಅನನ್ಯಾ ಸೇರಿದಂತೆ ಹಳೆ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು, ಕಾಲೇಜಿನ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.