ವಿದ್ಯೆಯ ಜೊತೆಗೆ ಕೌಶಲ್ಯಗಳನ್ನೂ ಹೆಚ್ಚಿಸಿಕೊಳ್ಳಿ – ಪ್ರಮೋದ್ ಮಧ್ವರಾಜ್
ಉಡುಪಿ: ವಿದ್ಯಾರ್ಥಿಗಳು ಪಾಠಗಳನ್ನು ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳನ್ನು ಗಳಿಸುವುದರ ಜೊತೆಗೆ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ, ಕಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂಬುದಾಗಿ ಕರ್ನಾಟಕ ಸರಕಾರ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವರು, ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಪ್ರಮೋದ್ ಮಧ್ವರಾಜ್ ನುಡಿದರು.
ಅವರು ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಾಲಾ ತ್ರೈಮಾಸಿಕ ಪತ್ರಿಕೆ ‘ವನಸುಮ’ 5ನೇ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಬೇಕಾದರೆ ಪಾಠೇತರ ಚಟುವಟಿಕೆಗಳೂ ಅಗತ್ಯ. ಅವು ನಮ್ಮಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸುತ್ತವೆ. ಉತ್ತಮ ನಾಗರಿಕನನ್ನಾಗಿ ಮಾಡುತ್ತವೆ. ವಳಕಾಡು ಶಾಲೆ ಪಾಠ, ಫಲಿತಾಂಶದಲ್ಲೂ ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ಮುಂದಿದೆ. ಈ ಪರಂಪರೆ ಮುಂದುವರಿಯಲಿ. ಶಾಲೆಯ ಅಭಿವೃದ್ಧಿಯ ಪಥ ಶಾಲಾ ಪತ್ರಿಕೆಯ ಮೂಲಕ ಸಮಾಜಕ್ಕೆ ತಿಳಿಯಲಿ.
ಶಾಲಾ ಹಸ್ತಪತ್ರಿಕೆ ‘ಮುಂಬೆಳಕು’ ನ್ನು ಉಡುಪಿ ಜಿಲ್ಲಾ ಪಂಚಾಯತ್‍ನ ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಡುಪಿ ನಗರಸಭೆಯ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯೆ ಗೀತಾ ರವಿ ಶೇಟ್, ಮಂಗಳೂರು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಅಶೋಕ ಕಾಮತ್. ಬೆಂಗಳೂರಿನ ಟಿಸಿಎಸ್‍ನ ಸೀನಿಯರ್ ಕನ್ಸಲ್ಟೆಂಟ್ ಅರುಣ್ ಕುಮಾರ್ ರೆಂಜಾಳ, ಉಡುಪಿ ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ರಂಜನ್ ಕೆ., ತ್ರಿಷಾ ಕ್ಲಾಸಸ್‍ನ ಸ್ಥಾಪಕ ಗೋಪಾಲಕೃಷ್ಣ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್ ಶೆಣೈ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಇಂದು ರಮಾನಂದ ಭಟ್, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗಭೂಷಣ ಶೇಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಿದರು. ‘ಪುಸ್ತಕ ಓದಿ, ಬಹುಮಾನ ಗೆಲ್ಲಿ’ ಸ್ಫರ್ಧೆಯ ಬಹುಮಾನ, ದತ್ತಿನಿಧಿ ಬಹುಮಾನ, ಚಾಂಪಿಯನ್‍ಶಿಪ್ ಬಹುಮಾನಗಳನ್ನು ನೀಡಲಾಯಿತು.
ಮುಖ್ಯೋಪಾಧ್ಯಾಯಿನಿ ನಿರ್ಮಲ ಬಿ. ಅತಿಥಿಗಳನ್ನು ಸ್ವಾಗತಿಸಿ ಶಾಲಾ ವರದಿವಾಚನಗೈದರು. ಕಲಾಶಿಕ್ಷಕ ಉಪಾಧ್ಯಾಯ ಮೂಡುಬೆಳ್ಳೆ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ರಂಜನಿ, ವಿದ್ಯಾರ್ಥಿಗಳಾದ ಕಿಶನ್ ನಾಯಕ್, ಅನಂತ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.