ವಿಧಾನಪರಿಷತ್ ಚುನಾವಣೆಗೆ ಲಭಿಸದ ಟಿಕೆಟ್ – ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾನ!
ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ನಿರಾಶೆಯಾಗಿದ್ದು ತನ್ನ ಅಸಮಾಧಾನವನ್ನು ಟ್ವೀಟ್ ಮೂಲಕ ತೋಡಿಕೊಂಡಿದ್ದಾರೆ.
ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಘುಪತಿ ಭಟ್ ಅವರು “ಎಂಎಲ್ಸಿ ಟಿಕೆಟ್ ಘೋಷಣೆಯಾಗಿದೆ. ಶಿಕ್ಷಕರ ಕ್ಷೇತ್ರದ ಟಿಕೆಟ್ ಚಿಕ್ಕಮಗಳೂರಿನ ಜೆಡಿಎಸ್ ಅಭ್ಯರ್ಥಿಗೆ ಹಂಚಿಕೆಯಾಗಿದ್ದು, ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ಪದವೀಧರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.”
ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗಿನ ಶಿಕ್ಷಿತ ಮತದಾರರ ನಿರೀಕ್ಷೆಯನ್ನು ಈಡೇರಿಸಲು ವಿಫಲವಾಗಿರುವ ಬಿಜೆಪಿಯ ಈ ನಿರ್ಧಾರದಿಂದ ನಲವತ್ತು ವರ್ಷಗಳ ಸಂಪ್ರದಾಯಕ್ಕೆ ತೆರೆ ಬಿದ್ದಿದ್ದು, ಕರಾವಳಿ ಭಾಗದ ಶಿಕ್ಷಕರ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಂಎಲ್ಸಿ ಟಿಕೆಟ್ ಹಂಚಿಕೆಯಿಂದ, ನಾಲ್ಕು ದಶಕಗಳಿಂದ ಕರಾವಳಿ ಭಾಗದ ಶಿಕ್ಷಕರ ಕ್ಷೇತ್ರವನ್ನು ಕಡೆಗಣಿಸಿದ ಬಿಜೆಪಿಯು ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದು, ಆಗಿರುವ ಅನ್ಯಾಯವನ್ನು ಯಾರು ಬಗೆಹರಿಸುತ್ತಾರೆ ಎಂದು ಕೇಳಬೇಕಾಗಿದೆ.
ಪಕ್ಷದ ನಿರ್ಧಾರದಿಂದ ನಾನು ಬೇಸರಗೊಂಡಿದ್ದು ಮತ್ತು ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಬೆಂಬಲಿಗರ ಕಳವಳವನ್ನು ಹಂಚಿಕೊಂಡಿದ್ದೇನೆ. ನಾನು ಚರ್ಚೆಗೆ ಮುಕ್ತನಾಗಿದ್ದೇನೆ ಮತ್ತು ಈ ವಿಷಯದಲ್ಲಿ ನಿಮ್ಮ ಮಾರ್ಗದರ್ಶನವನ್ನು ಸ್ವಾಗತಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ರಘುಪತಿ ಭಟ್ ಅವರು ಪಕ್ಷದ ನಿರ್ಧಾರದಿಂದ ನಿಜಕ್ಕೂ ಬೇಸರಗೊಂಡಿದ್ದೇನೆ. ಇಂದು ಸಂಜೆಯ ವರೆಗೂ ನೈರುತ್ಯ ಪದವೀಧರ ಕ್ಷೇತ್ರಕ್ಕೆ ನನ್ನ ಹೆಸರು ಇದೆ ಎನ್ನುವ ಮಾಹಿತಿ ಪಕ್ಷದ ನಾಯಕರಿಂದ ಲಭಿಸಿತ್ತು ಆದರೆ ಪಟ್ಟಿ ಪ್ರಕಟವಾಗಿದ್ದು ಅದರಲ್ಲಿ ನನ್ನ ಹೆಸರು ಇಲ್ಲ ಎನ್ನುವುದು ನಿಜಕ್ಕೂ ನನಗೆ ಬೇಸರ ತರಿಸಿದೆ.
1994 ರಿಂದ, ನಾನು ಸಕ್ರಿಯ ಕಾರ್ಯಕರ್ತ ಮತ್ತು ಪದಾಧಿಕಾರಿ ಸೇರಿದಂತೆ ಭಾರತೀಯ ಜನತಾ ಪಕ್ಷದ ವಿವಿಧ ಹುದ್ದೆಗಳಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದೇನೆ. ಮೂರು ಬಾರಿ ವಿಧಾನಸಭೆಗೆ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದ್ದೇನೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ನನ್ನನ್ನು ಬದಲಾಯಿಸಲಾಗಿದ್ದು, ಟಿವಿ ಮಾಧ್ಯಮದ ಪ್ರಕಟಣೆಯ ಮೂಲಕ ನನ್ನ ಸ್ಥಾನವನ್ನು ಬದಲಾಯಿಸಲಾಗಿದೆ ಎನ್ನುವುದು ನನ್ನ ಗಮನಕ್ಕೆ ಬಂದಿತ್ತು ಈ ವಿಷಯವು ಬಿಜೆಪಿಯ ಪ್ರಸ್ತುತ ನಿಲುವಿನ ಬಗ್ಗೆ ನನಗೆ ಸಾಕಷ್ಟು ಕಳವಳವನ್ನು ಉಂಟುಮಾಡಿದೆ.
ಈ ಹಿನ್ನಡೆಯ ನಡುವೆಯೂ ಪಕ್ಷಕ್ಕೆ ಸೇವೆ ಸಲ್ಲಿಸಲು ಬದ್ಧನಾಗಿದ್ದು ಕೆಲಸ ಮಾಡಿರುತ್ತೇನೆ. ಆಗ ರಾಜ್ಯ ಬಿಜೆಪಿ ಮುಖಂಡರು ಮುಂಬರುವ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶದ ಬಗ್ಗೆ ಭರವಸೆ ನೀಡಿದ್ದರು. ಇದಕ್ಕೆ ಪೂರ್ವಸಿದ್ಧತೆಯಾಗಿ, ನಾನು ಪದವೀಧರ ಮತದಾರರ ಸದಸ್ಯತ್ವ ಅಭಿಯಾನವನ್ನು ಮುನ್ನಡೆಸಿದ್ದಲ್ಲದೆ, ಹೆಚ್ಚಿನ ಸಂಖ್ಯೆಯ ನೋಂದಣಿಗಳನ್ನು ಮಾಡಿಸಿರುತ್ತೇನೆ. ಇತ್ತೀಚೆಗೆ ಪಕ್ಷದಿಂದ ನೇಮಿಸಲ್ಪಟ್ಟ ಲೋಕಸಭಾ ಚುನಾವಣಾ ಉಸ್ತುವಾರಿಯಾಗಿ ಶಿವಮೊಗ್ಗದಲ್ಲಿ ಕೆಲಸ ಮಾಡಲು 40 ದಿನಗಳನ್ನು ಮೀಸಲಿಟ್ಟಿದ್ದೇನೆ.
ವಿಧಾನಸಭಾ ಚುನಾವಣೆಯ ವೇಳೆ ಕೂಡ ನನ್ನಲ್ಲಿ ಕನಿಷ್ಠ ಚರ್ಚೆ ಮಾಡದೆ ಟಿಕೇಟ್ ನಿರಾಕರಿಸಿದ್ದು ಆ ವೇಳೆ ಪಕ್ಷದ ನಾಯಕರು ಪರಿಷತ್ ಚುನಾವಣೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸುಮಾರು 38000 ಪದವೀಧರರ ನೋಂದಣಿಯನ್ನು ಉಡುಪಿ ಮಂಗಳೂರಿನಲ್ಲಿ ನನ್ನ ನೇತೃತ್ವದಲ್ಲಿ ಮಾಡಿಸಿದ್ದೆ. ಪಕ್ಷದಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡುವವರನ್ನು ಕಡೆಗಣಿಸಿ ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಮಣೆ ಹಾಕಿದರೆ ನಮ್ಮಂತ ನಿಷ್ಠಾವಂತರ ಗತಿಯೇನು? ಪಕ್ಷದ ನಿರ್ಧಾರಿಂದ ನಾನು ನಿಜಕ್ಕೂ ಬೇಸರಗೊಂಡಿದ್ದೇನೆ ಮುಂದೆ ನಾಯಕರು ಯಾವ ರೀತಿಯಲ್ಲಿ ಇದನ್ನು ಬಗೆಹರಿಸುತ್ತಾರೆ ಎನ್ನುವುದನ್ನು ಕಾದು ನೋಡುವುದಾಗಿ ಅವರು ಹೇಳಿದರು.