Home Mangalorean News Kannada News ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಿಂದ ಆಶ್ರಯದಾತ ರಮೇಶ್ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಿಂದ ಆಶ್ರಯದಾತ ರಮೇಶ್ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

Spread the love

ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿಯಿಂದ ಆಶ್ರಯದಾತ ರಮೇಶ್ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ಉಡುಪಿ: ಜಿಲ್ಲಾ ಆಶ್ರಯದಾತ ಆಟೋ ಯೂನಿಯನ್‍ನ ಸ್ಥಾಪಕಾಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾಗಿರುವ ಕೆ. ರಮೇಶ್ ಶೆಟ್ಟಿಯವರು ಮುಂಬರುವ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೀಳಿಯಲಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾದ್ಯಾದಂತ ಸುಮಾರು 5 ಸಾವಿರಕ್ಕೂ ಮಿಕ್ಕಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘಟಿಸಿ, ಆಶ್ರಯದಾತ ಆಟೋ ಯೂನಿಯನ್ ಸ್ಥಾಪಿಸಿದ ರಮೇಶ್ ಶೆಟ್ಟಿ, ಕಳೆದ ಒಂದು ವರ್ಷದಿಂದ ಜಿಲ್ಲಾ ಜಯಕರ್ನಾಟಕ ಸಂಘಟನೆಯನ್ನು ಜಿಲ್ಲೆಯಲ್ಲಿ ಸಂಘಟಿಸಿ ಸುಮಾರು 25 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಸೇರ್ಪಡೆಗೊಳಿಸಿದ ಹೆಗ್ಗಳಿಕೆ ಅವರದ್ದಾಗಿದೆ. ರಿಕ್ಷಾ ಚಾಲಕರ ಸಮಸ್ಯೆಗಳಿಗೆ ಹಾಗೂ ಬಡ, ಹಿಂದುಳಿದ ವರ್ಗಗಳ ಜನರಿಗೆ ಜಾತಿ, ಮತ ಭೇದವಿಲ್ಲದೇ ನಿರಂತರ ಸೇವೆಗಳನ್ನು ನೀಡುತ್ತಾಲೇ ಬಂದಿದ್ದಾರೆ.

ಉಡುಪಿ, ಕಾರ್ಕಳ, ಕುಂದಾಪುರ ನಗರಗಳಲ್ಲಿ ರಿಕ್ಷಾ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಲು ಸ್ವತ: ತನ್ನ ದುಡಿಮೆಯ ಹಣದಿಂದಲೇ ಕಚೇರಿಯನ್ನು ತೆರೆದು ಅವರ ಸಮಸ್ಯೆಗಳಿಗೆ ಹಗಲಿರುಳು ಶ್ರಮಿಸುತ್ತಿರುವ ರಮೇಶ್ ಶೆಟ್ಟಿಯು ಬಹುಜನರ ಒತ್ತಾಯದ ಮೇರೆಗೆ ಬಾರಿಯ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಆ ಮೂಲಕ ಎದುರಾಳಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಸೋಲು-ಗೆಲುವಿಗೆ ಕಿಂಗ್‍ಮೇಕರ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಜಾತಿ, ಮತ, ಭೇದವಿಲ್ಲದೆ ದಲಿತ, ಹಿಂದುಳಿದ, ಮುಸ್ಲಿಮ್ ಸಮುದಾಯದ ತೀರ ಬಡ ಕುಟುಂಬದವರಿಗೆ ಈಗಾಗಲೇ 17 ಮನೆಗಳನ್ನು ಉಚಿತವಾಗಿ ನಿರ್ಮಿಸಿಕೊಟ್ಟಿರುವ ರಮೇಶ್ ಶೆಟ್ಟಿಯು ಆ ಮೂಲಕ ಉಡುಪಿಯಲ್ಲಿ ಆಶ್ರಯದಾತರೆಂದೇ ಹೆಸರಾಗಿದ್ದಾರೆ. ಅಲ್ಲದೇ ಬಡವರ ಮಕ್ಕಳ ಶಿಕ್ಷಣ, ಮದುವೆ ಹಾಗೂ ಆರೋಗ್ಯಕ್ಕಾಗಿ ನಿರಂತರ ಸಹಾಯಗಳನ್ನು ಮಾಡುತ್ತಾಲೇ ಬಂದಿದ್ದಾರೆ.

ರಿಕ್ಷಾ ಚಾಲಕರ ಕಲ್ಯಾಣಕ್ಕಾಗಿ ಹತ್ತು-ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ, ಅವರ ಸಮಸ್ಯೆಗಳಿಗೆ ಹೋರಾಟ ನಡೆಸುತ್ತಾ ಬಂದಿರುವ ರಮೇಶ್ ಶೆಟ್ಟಿ, ರಿಕ್ಷಾ ಚಾಲಕರು ಸಾರಿಗೆ ಕಚೇರಿಯಲ್ಲಿ ಒಂದೇ ಒಂದು ಪೈಸೆ ಲಂಚ ನೀಡದೇ ಸರಕಾರಕ್ಕೆ ಸಲ್ಲಬೇಕಾದ ಹಣವನ್ನು ಮಾತ್ರ ಕಟ್ಟುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಅಧಿಕಾರ ಇಲ್ಲದೆಯೇ ಜನಪರ ಹೋರಾಟಗಳನ್ನು ಮಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಅಧಿಕಾರ ಬಂದರೆ ಬಡವರಿಗೆ ಫ್ಲಾಟ್‍ಗಳನ್ನು ನಿರ್ಮಿಸಿ, ಬಡತನ ನಿರ್ಮೂಲನೆ ಮಾಡುವ ಉದ್ದೇಶವಿದೆ ಎನ್ನುತ್ತಾರೆ ರಮೇಶ್ ಶೆಟ್ಟಿ. ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಸಿಗುವಂತಹ ಸೌಲಭ್ಯಕ್ಕೆ ವಾರ್ಷಿಕ ತಲಾ 75 ರೂಪಾಯಿಯನ್ನು ತಾನೇ ಕಟ್ಟಿ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡುದ್ದೇನೆ. ಅಕ್ರಮ- ಸಕ್ರಮ ಸಮಸ್ಯೆ, ನೀರಿನ ಸಮಸ್ಯೆ, ಡ್ರೈನೇಜ್, ಕಸ ವಿಲೇವಾರಿ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ, ಬಡವರಿಗೆ ಮನೆ ನಿರ್ಮಿಸುವ ಕೆಲಸವೂ ನಡೆದಿಲ್ಲ ಎನ್ನುತ್ತಾರೆ ರಮೇಶ್ ಶೆಟ್ಟಿ. ನಗರದ ಹೊರವಲಯದ ಅಂಬಲಪಾಡಿಯ ಕಪ್ಪೆಟ್ಟುವಿನಲ್ಲಿ ಜನಿಸಿದ ರಮೇಶ್ ಶೆಟ್ಟಿ, ಹೊಟೇಲ್ ಉದ್ಯಮಿಯಾಗಿದ್ದಾರೆ. ಪತ್ನಿ ಸಬೀನಾ ಆರ್ ಶೆಟ್ಟಿ ನಗರದಲ್ಲಿ ವಕೀಲೆಯಾಗಿದ್ದು, ಬಡ, ನಿರ್ಗತಿಕರ ಪರ ಉಚಿತವಾಗಿ ಕಾನೂನು ಸೇವೆಗಳನ್ನು ನೀಡುತ್ತಾ ಬರುತ್ತಿದ್ದಾರೆ.


Spread the love

Exit mobile version