Home Mangalorean News Kannada News ವಿಧಿ 370ನ್ನು ರದ್ದು ಮಾಡಿರುವುದು ಯಾರೋ ಒಬ್ಬರ ಅಥವಾ ಒಂದು ಪಕ್ಷದ ನಿರ್ಧಾರ ಅಲ್ಲ –...

ವಿಧಿ 370ನ್ನು ರದ್ದು ಮಾಡಿರುವುದು ಯಾರೋ ಒಬ್ಬರ ಅಥವಾ ಒಂದು ಪಕ್ಷದ ನಿರ್ಧಾರ ಅಲ್ಲ – ಸೈಯ್ಯದ್ ಅತಾ ಹಸ್ನೈನ್‍

Spread the love

ವಿಧಿ 370ನ್ನು ರದ್ದು ಮಾಡಿರುವುದು ಯಾರೋ ಒಬ್ಬರ ಅಥವಾ ಒಂದು ಪಕ್ಷದ ನಿರ್ಧಾರ ಅಲ್ಲ – ಸೈಯ್ಯದ್ ಅತಾ ಹಸ್ನೈನ್‍

ಮಂಗಳೂರು: ಜಮ್ಮು ಕಾಶ್ಮೀರದ ಮೇಲಿನ ವಿಧಿ 370ನ್ನು ರದ್ದು ಮಾಡಿರುವುದು ಯಾರೋ ಒಬ್ಬರ ಅಥವಾ ಯಾವುದೋ ಒಂದು ಪಕ್ಷದ ನಿರ್ಧಾರ ಅಲ್ಲ. ಬದಲಾಗಿ, ತಳಮಟ್ಟದಿಂದ ಬಂದ ಶಿಫಾರಸ್ಸುಗಳ ಬಗ್ಗೆ ಚರ್ಚಿಸಿ ತೆಗೆದ ದಿಟ್ಟ ನಿರ್ಧಾರವಾಗಿದೆ. ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ರಾಜತಾಂತ್ರಿಕವಾಗಿ ಆಳವಡಿಸಿದೆ ಎಂದು ಭಾರತೀಯ ಸೇನೆಯ ನಿವೃತ್ತ ಜನರಲ್ ಸೈಯ್ಯದ್ ಅತಾ ಹಸ್ನೈನ್‍ರವರು, ವಿಧಿ 370ರ ರದ್ಧತಿಯ ಬಗ್ಗೆ ತಮ್ಮ ವಿಚಾರವನ್ನು ಪ್ರಕಟಿಸಿದರು.

ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ, ಮಂಗಳೂರು ಲಿಟ್ ಫೆಸ್ಟ್‍ನ ಭಾಗವಾಗಿ ಎರಡನೆ ದಿನ ನಡೆದ “ಕಾಶ್ಮೀರ- ಭವಿಷ್ಯದತ್ತ ಒಂದು ನೋಟ” ಎಂಬ ವಿಷಯದ ಚರ್ಚೆಯಲ್ಲಿ ಹೇಳಿದರು. ಇವರೊಂದಿಗೆ ಅಂಕಣಕಾರ ನಲ್ಪತ್ ಮತ್ತು ಸಿರಿಯಾ ಮೂಲದ ಭಾರತೀಯ ಪತ್ರಕರ್ತ ಡಾ ವೈಲ್ ಅವ್ವೆದ್ ಮುಖ್ಯವೇದಿಕೆಯಲ್ಲಿ ತಮ್ಮ ವಿಚಾರಗಳನ್ನೂ ತಿಳಿಸಿದರು.

ನರಸಿಂಹ ರಾವ್ ಮತ್ತು ವಾಜಪೇಯಿಯವರು ಒಟ್ಟಾಗಿದ್ದಾಗಲೇ 370 ವಿಧಿ ರದ್ದಾಗಬೇಕಿತ್ತು. ತಡವಾದರೂ ಈಗ ರದ್ದಾಗಿರುವುದು ಸ್ವಾಗತಾರ್ಹ. ಈಗಾಗಲೇ ಜನರ ಒಳಿತಿಗಾಗಿ ಕಟ್ಟುನಿಟ್ಟಿನ ನೀತಿಗಳನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಒಬ್ಬ ಕೊನೆಯ ಕಾಶ್ಮೀರಿ ಜೈ ಹಿಂದ್ ಹೇಳಿದಾಗಲೇ ಅದು ನಿಜವಾದ ಗೆಲುವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಅಂಕಣಕಾರ ನಲ್ಪತ್ ಮಾತನಾಡಿ, ರಾಜಕೀಯ ನಾಯಕರೇ ಕಾಶ್ಮೀರದ ಪರಿಸ್ಥಿತಿಗೆ ಕಾರಣ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೊಬ್ಬರ ಮಾತನ್ನು ಉಲ್ಲೇಖಿಸಿದ ಅವರು, ಕಾಶ್ಮೀರ ಪ್ರತ್ಯೇಕವಾಗಬೇಕೆನ್ನುವುದು ಅಲ್ಲಾಹುನ ಬಯಕೆ ಎಂದಿದ್ದಾರೆ. ಇಂತಹವರಿಂದಲೇ ಕಾಶ್ಮೀರಿ ಜನರಿಗೆ ತೊಂದರೆಯಾಗುತ್ತಿದೆ. ಹೀಗೆ ಕೆಲವು ಘಟನೆಗಳನ್ನು ಉಲ್ಲೇಖಿಸಿ, ರಾಜಕೀಯ ನಾಯಕರ ಬಂಧನವನ್ನು ಸಮರ್ಥಿಸಿಕೊಂಡರು. ಅದಲ್ಲದೇ, ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ವಿಚಾರವನ್ನು ತಳ್ಳಿ ಹಾಕಿದ ಅವರು, 200 ಮಿಲಿಯನ್ ಜನ ಸಂಖ್ಯೆಯನ್ನು ಅಲ್ಪಸಂಖ್ಯಾತರೆಂದು ಕರೆಯುವುದು ವಿಪರ್ಯಾಸ ಎಂದರು. ಮದರಸ ಶಿಕ್ಷಣ ಪದ್ಧತಿಯನ್ನು ಖಂಡಿಸಿದ ಅವರು, ಸಿರಿಯಾ ಅಥವಾ ಇತರ ಇತರ ಅರಬ್ ರಾಷ್ಟ್ರಗಳಲ್ಲಿ ಈ ಮದರಸಾಗಳೇ ತೀವೃಗಾಮಿ ನೀತಿಯನ್ನು ಪಸರಿಸುತ್ತಿದೆ. ಹಾಗಾಗಿ ಭಾರತದಲ್ಲೂ ದೇಶ ಭಕ್ತಿ ಎಂಬ ಕಲ್ಪನೆಯು ಶಾಲೆಯಿಂದಲೇ ಪ್ರಾರಂಭವಾಗಬೇಕು ಎಂದು ಹೇಳಿದರು.

ಜಮ್ಮು ಕಾಶ್ಮೀರ ಮತ್ತು ಅದರ ಭವಿಷ್ಯದ ಬಗ್ಗೆ ಸಿರಿಯಾ ಮೂಲದ ಭಾರತೀಯ ಪತ್ರಕರ್ತ ಡಾ| ವೈಲ್ ಮಾತನಾಡಿ, ಭಾರತ ದೇಶದ ವಿಭಜನೆಯಲ್ಲಿ ಜಮ್ಮು ಕಾಶ್ಮೀರದ ಜನರು ಬಲಿಪಶುಗಳು ಎಂದರು. ಅವರೇ ಖುದ್ದಾಗಿ ನಡೆಸಿದ ಒಂದು ಸಮೀಕ್ಷೆಯ ಬಗ್ಗೆ ತಿಳಿಸಿದ ಅವರು, ಅವರು ಪ್ರಶ್ನಿಸಿದವರಲ್ಲಿ ಸುಮಾರು ಎಲ್ಲರೂ ಕಾಶ್ಮೀರ ಭಾರತದ ಭಾಗವಾಗಬೇಕೇಂದು ಬಯಸಿದ್ದಾರೆ ಎಂದರು. ಕಾಶ್ಮೀರವು ಭಾರತದ ಭಾಗವಾಗಿಯೇ ಇದೆ. ಆದರೆ ಅಲ್ಲಿನ ಜನರನ್ನು ಭಾರತ ರಾಷ್ಟ್ರದ ಮುಖ್ಯ ವಾಹಿನಿಗೆ ಕರೆತರುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಆನಂದ್ ರಂಗನಾಥ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


Spread the love

Exit mobile version