ವಿನಯ್ ಕುಮಾರ್ ಸೊರಕೆಯಿಂದ ಕ್ರಿಸ್ತ ಕಿರಣ ಕಿರುಚಿತ್ರ ಬಿಡುಗಡೆ
ಉಡುಪಿ: ಶಂಕರಪುರ ಸಂತ ಯೋವಾನ್ನರ ಧರ್ಮ ಕೇಂದ್ರ, ಪಾಂಗಾಳ ನಿರ್ಮಿಸಿರುವ ಕ್ರಿಸ್ತಕಿರಣ ಕಿರುಚಿತ್ರದ ಬಿಡುಗಡೆ ಕ್ರಿಸ್ಮಸ್ ಹಬ್ಬದ ದಿನದಂದು ನಡೆಯಿತು.
ಕಾಪು ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ವಿನಯ್ ಕುಮಾರ್ ಸೊರಕೆಯವರು ಚಿತ್ರದ ಪ್ರದರ್ಶನಕ್ಕೆ ಚಾಲನೆ ನೀಡುವ ಮುಖಾಂತರ ಚಿತ್ರವನ್ನು ಬಿಡುಗಡೆಗೊಳಿಸಿದರು.
ಚಿತ್ರದ ಕಥೆಯನ್ನು ರಚಿಸಿ ನಿರ್ದೇಶಿಸಿದ ಧರ್ಮಕೇಂದ್ರದ ಸಹಾಯಕ ಧರ್ಮಗುರುಗಳಾದ ವಂ. ರೊಯ್ಸನ್ ಫೆರ್ನಾಂಡಿಸ್, ಚಿತ್ರತಂಡದ ಎಲ್ಲಾ ಸದಸ್ಯರನ್ನು ಮತ್ತು ಚಿತ್ರದ ನಿರ್ಮಾಣವನ್ನು ಮಾಡಿರುವ ಧರ್ಮಕೇಂದ್ರವನ್ನು ಶ್ಲಾಘಿಸಿದ ಅವರು ಯೇಸುವಿನ ಪ್ರೀತಿ ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುವ ಇಂತಹ ಚಿತ್ರಗಳಿಂದ ಸಮಾಜಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಧರ್ಮಕೇಂದ್ರದ ಪ್ರಧಾನ ಧರ್ಮ ಗುರುಗಳಾದ ವಂ. ಫರ್ಡಿನಂಡ್ ಗೊನ್ಸಾಲ್ವಿಸ್, ವಂ. ವಿನ್ಸೆಂಟ್ ಕುವೆಲ್ಹೊ, ವಂ. ಲೋರೆನ್ಸ್ ಮೆಂಡೋನ್ಸ, ಚಿತ್ರ ನಿರ್ಮಾಣಕ್ಕೆ ಸಹಕರಿಸಿದ ಬಿಗ್ ಜೆ ಟಿವಿ ಚಾನೆಲ್‍ನ ನಿರ್ದೇಶಕರು ಮತ್ತು ಕರ್ನಾಟಕ ಸರಕಾರದ ಕ್ರಿಸ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ, ಮಾರ್ಕ್ ವಾಜ್, ಕ್ಲೇರಾ ಮೆಂಡೋನ್ಸಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
30 ನಿಮಿಷಗಳ ಪ್ರದರ್ಶವನ್ನು ಹೊಂದಿರುವ ಈ ಚಿತ್ರದಲ್ಲಿ ಸುಮಾರು 50 ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದು, ಚಿತ್ರ ಎರಡು ಸುಂದರವಾದ ಹಾಡು ಮತ್ತು ನೃತ್ಯಗಳನ್ನು ಹೊಂದಿದೆ. ಮಣಿಪುರ, ಕುಂಟಲ್ ನಗರ ಮತ್ತು ಕುಂಜಾರುಗಿರಿ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದ್ದು, ಎಂಟು ದಿನಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರ ಶೀಘ್ರದಲ್ಲಿ ಯೂಟ್ಯೂಬ್ ಚಾನೆಲ್‍ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.