ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶಂಕಿತ ಆರೋಪಿಗಳು ನಾಪತ್ತೆಯಾಗಿದ್ದು ಅವರ ಪತ್ತೆಗೆ ಪೋಲಿಸರು ಸಾರ್ವಜನಿಕರ ನೆರವು ಕೋರಿದ್ದಾರೆ.
ಪ್ರಕರಣದ ಶಂಕಿತ ಆರೋಪಿಗಳನ್ನು ಪಂಜಿಮೊಗರು ನಿವಾಸಿ ಶಿವ (29) ಹಾಗೂ ಕಾವೂರು ನಿವಾಸಿ ಶ್ರೀಕಾಂತ್ (40) ಎಂದು ಗುರುತಿಸಲಾಗಿದೆ.
ಮಾರ್ಚ್ 21 ರಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಬಾಬ್ತು ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಅಪರಿಚಿತ ವ್ಯಕ್ತಿಗಳು ಅವರನ್ನು ತಲವಾರಿನಿಂದ ಕಡಿದು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ವಿನಾಯಕ ಪಾಂಡುರಂಗ ಬಾಳಿಗರನ್ನು ಜ್ಯೋತಿಯ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದಾಗ ಅವರು ಮೃತಪಟ್ಟಿದ್ದರು.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ವಿನಿತ್ ಪೂಜಾರಿ ಮತ್ತು ನಿಶಿತ್ ದೇವಾಡಿಗ ಎಂಬವರನ್ನು ಮಾರ್ಚ್ 27 ರಂದು ದಸ್ತಗಿರಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈ ವರೆಗಿನ ತನಿಖೆಯಿಂದ ಹಾಗೂ ದೊರೆತಿರುವ ಸಾಕ್ಷ್ಯಾಧಾರಗಳಿಂದ ಶಿವ ಹಾಗೂ ಶ್ರೀಕಾಂತ್ ಎಂಬ ಶಂಕಿತ ಆರೋಪಿಗಳನ್ನು ಈ ಪ್ರಕರಣದಲ್ಲಿ ತನಿಖೆಗೆ ಒಳಪಡಿಸಬೇಕಾಗಿರುತ್ತದೆ.
ಇವರುಗಳ ಪತ್ತೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಲು ಕೋರಲಾಗಿದೆ. ಈ ಮೇಲೆ ನಮೂದಿಸಿದ ಶಂಕಿತ ಆರೋಪಿತರ ಸುಳಿವು ಲಭ್ಯವಾದಲ್ಲಿ ಕೂಡಲೇ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಕೇಂದ್ರ ಉಪವಿಭಾಗರವರ ದೂರವಾಣಿ ಸಂಖ್ಯೆ: 9480805320 ಕ್ಕೆ ಕರೆಗಳ ಮೂಲಕ, ಎಸ್ಎಂಎಸ್, whatsApp, ಈ ಮೇಲ್ (sdpocitymgc@ksp.gov.in) ಯಾವುದೇ ರೀತಿಯಲ್ಲಿ ಮಾಹಿತಿ ನೀಡಲು ಕೋರಲಾಗಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಹಾಗೂ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.