ವಿಮಾನಗಳ ಸುರಕ್ಷತೆ ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಸಚಿವ ರಮಾನಾಥ ರೈ ಆಗ್ರಹ

Spread the love

ವಿಮಾನಗಳ ಸುರಕ್ಷತೆ ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಸಚಿವ ರಮಾನಾಥ  ರೈ ಆಗ್ರಹ
ಮ0ಗಳೂರು :ಮಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸುವ ವಿಮಾನಗಳ ಸುರಕ್ಷತೆ ಹಾಗೂ ವಿಮಾನನಿಲ್ದಾಣದ ಭದ್ರತೆ ಬಗ್ಗೆ  ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆಗ್ರಹಿಸಿದ್ದಾರೆ.
ಈ ಸಂಬಂಧ ಕೇಂದ್ರ ವಿಮಾನಯಾನ ಸಚಿವ ಪಿ. ಅಶೋಕ್ ಗಜಪತಿ ರಾಜು ಅವರಿಗೆ ಪತ್ರ ಬರೆದಿರುವ ಉಸ್ತುವಾರಿ ಸಚಿವರು, ಇತ್ತೀಚೆಗೆ ಮಂಗಳೂರು ವಿಮಾನನಿಲ್ದಾಣದಿಂದ 173 ಪ್ರಯಾಣಿಕರನ್ನು ಹೊತ್ತೊಯ್ದು ದೋಹಾಕ್ಕೆ ಹೊರಟಿದ್ದ ಏರ್‍ಇಂಡಿಯಾ ವಿಮಾನ ಇಂಜಿನ್ ವೈಫಲ್ಯದಿಂದ ಆಕಾಶದಲ್ಲೇ ಅಪಾಯದ ಸ್ಥಿತಿಗೆ ತಲುಪಿತ್ತು. ಅದೇ ರೀತಿ 185 ಪ್ರಯಾಣಿಕರನ್ನು ಕರೆತರುತ್ತಿದ್ದ ಲ್ಯಾಂಡಿಂಗ್ ಆಗುತ್ತಿದ್ದ ಏರ್‍ಇಂಡಿಯಾ ವಿಮಾನವೂ ರನ್‍ವೇಯಲ್ಲಿ ಸ್ಕಿಡ್ ಆಗಿತ್ತು. 2010ರಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 160 ಪ್ರಯಾಣಿಕರು ಸಾವನ್ನಪ್ಪಿದ್ದರು. ಮಂಗಳೂರು ವಿಮಾನ ನಿಲ್ದಾಣದ ಭದ್ರತೆ ಹಾಗೂ ವಿಮಾನಗಳಿಂದ ನಡೆಯುತ್ತಿರುವ ಘಟನೆಗಳು ಕಳವಳಕಾರಿಯಾಗಿವೆ. ಇದರಿಂದ ಮಂಗಳೂರು ವಿಮಾನನಿಲ್ದಾಣದಿಂದ ಸಂಚರಿಸುತ್ತಿರುವ ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಉಸ್ತುವಾರಿ ಸಚಿವರು ಕೇಂದ್ರ ಸಚಿವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಸ್ವತ: ಗಮನಹರಿಸಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಭದ್ರತೆ ಬಗ್ಗೆ ಗಮನಹರಿಸುವಂತೆ ಹಾಗೂ ಮಂಗಳೂರಿನಿಂದ ವಿದೇಶಗಳಿಗೆ ಹೊರಡುವ ಸಂಚಾರಕ್ಕೆ ಹೊಸ ವಿಮಾನಗಳನ್ನು ಒದಗಿಸುವಂತೆ ಸಚಿವ ರಮಾನಾಥ ರೈ ಕೇಂದ್ರ ವಿಮಾನಯಾನ ಸಚಿವರನ್ನು ಮನವಿ ಮಾಡಿದ್ದಾರೆ.

Spread the love