Home Mangalorean News Kannada News ವಿಮಾನ ನಿಲ್ದಾಣದಲ್ಲಿ ಸ್ಫೋಟಕ; ತನಿಖೆಯಲ್ಲಿ ಪ್ರಗತಿ: ಕಮಿಷನರ್‌ ಡಾ| ಹರ್ಷ

ವಿಮಾನ ನಿಲ್ದಾಣದಲ್ಲಿ ಸ್ಫೋಟಕ; ತನಿಖೆಯಲ್ಲಿ ಪ್ರಗತಿ: ಕಮಿಷನರ್‌ ಡಾ| ಹರ್ಷ

Spread the love

ವಿಮಾನ ನಿಲ್ದಾಣದಲ್ಲಿ ಸ್ಫೋಟಕ; ತನಿಖೆಯಲ್ಲಿ ಪ್ರಗತಿ: ಕಮಿಷನರ್‌ ಡಾ| ಹರ್ಷ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾಗಿದ್ದ ಶಂಕಿತ ಸ್ಫೋಟಕದ ಕುರಿತಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಗಳು ಹಲವಾರು ಮಂದಿಯನ್ನು ತನಿಖೆಗೆ ಒಳಪಡಿಸಿದ್ದು, ಸಾಕಷ್ಟು ಪ್ರಗತಿ ಸಾಧಿಸಿವೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ತಿಳಿಸಿದ್ದಾರೆ.

ಹಲವಾರು ಮಂದಿ ಶಂಕಿತ ವ್ಯಕ್ತಿಗಳನ್ನು ಈಗಾಗಲೇ ಪ್ರಶ್ನಿಸಿದ್ದು, ಹಲವಾರು ಶಂಕಿತ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಶಂಕಿತನ ಗುರುತು ಪತ್ತೆಗಾಗಿ ಶೋಧ ಆರಂಭವಾಗಿದೆ ಎಂದು ವಿವರಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ತೆರಳಲು ಮತ್ತು ಅಲ್ಲಿಂದ ನಿರ್ಗಮಿಸಲು ಆರೋಪಿ ಬಳಸಿದನೆನ್ನಲಾದ ಆಟೊ ರಿಕ್ಷಾ ಮತ್ತು ರಿಕ್ಷಾ ಚಾಲಕನನ್ನು ಕೂಡ ವಶಕ್ಕೆ ಪಡೆದಿದ್ದು, ಈ ಕುರಿತ ವಿಚಾರಣೆ ಕೂಡ ಪ್ರಗತಿಯಲ್ಲಿದೆ.

ಹಾಗೆಯೇ ಆರೋಪಿಯು ಶಂಕಿತ ಬ್ಯಾಗನ್ನು ಬಿಟ್ಟುಹೋದ ಪ್ರಮುಖ ಘಟನೆಯ ಬಳಿಕ ಏರ್‌ಪೋರ್ಟ್‌ ಟರ್ಮಿನಲ್‌ ಮ್ಯಾನೇಜರ್‌ಗೆ ಬಂದ ಬೆದರಿಕೆ ಕರೆಗೂ ಶಂಕಿತ ಬ್ಯಾಗ್‌ ಪತ್ತೆ ಪ್ರಕರಣಕ್ಕೂ ಸಾಮ್ಯತೆ ಇದೆಯೇ ಎನ್ನುವ ಕುರಿತಂತೆ ತಾಳೆ ಹಾಕಿ ನೋಡುತ್ತಿದ್ದೇವೆ ಎಂದು ಆಯುಕ್ತರು ವಿವರಿಸಿದ್ದಾರೆ.

ಹಾಗೆಯೇ ಈ ಹಿಂದೆ ಇದೇ ರೀತಿ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ಬಾಂಬ್‌ ಬೆದರಿಕೆ ಕರೆ ಮಾಡಿದವರ ಚಹರೆಗೂ ಪ್ರಸ್ತುತ ಈ ಪ್ರಕರಣದ ಆರೋಪಿಯ ಚಹರೆಗೂ ಯಾವುದೇ ಸಾಮ್ಯತೆ ಇದೆಯೇ ಎನ್ನುವುದನ್ನೂ ಸೂಕ್ಷ್ಮವಾಗಿ ಪರಿಶೀ ಲಿಸಲಾಗುತ್ತಿದೆ ಎಂದಿದ್ದಾರೆ.

ಈಗಾಗಲೇ ಹಲವಾರು ವಿಮಾನ ನಿಲ್ದಾಣಗಳಿಂದ ಈ ರೀತಿಯ ಮಾಹಿತಿಗಳನ್ನು ಕ್ರೋಡೀಕರಿಸಿದ್ದೇವೆ. ಸಾರ್ವಜನಿಕರು ಈ ಚಹರೆಯನ್ನು ಹೋಲುವಂತಹ ಛಾಯಾಚಿತ್ರಗಳನ್ನು, ವೀಡಿಯೋಗಳನ್ನು ಕಳುಹಿಸಿದ್ದಾರೆ. ಅವೆಲ್ಲವುಗಳನ್ನು ತನಿಖಾ ತಂಡ ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ತಿಳಿಸಿದ್ದಾರೆ.

ತನಿಖೆಯಲ್ಲಿ ಭಾಗಿಯಾಗಿರುವ ಟೆಕ್ನಿಕಲ್‌ ತಂಡ ಬಿಡಿಡಿಎಸ್‌, ಬಾಂಬ್‌ ನಿಷ್ಕ್ರಿಯವಾದ ಬಳಿಕ ಅವಶೇಷಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಕೊಟ್ಟಿದೆ. ಸ್ಫೋಟಕದ ಸ್ವರೂಪ, ಅದು ಸ್ಫೋಟ ಗೊಂಡಿದ್ದರೆ ಪರಿಣಾಮ ಏನಾಗುತ್ತಿತ್ತು ಇತ್ಯಾದಿಗಳ ಕುರಿತಂತೆ ವರದಿಯನ್ನು ಎಫ್ಎಸ್‌ಎಲ್‌ ಸಲ್ಲಿಸಲಿದೆ ಎಂದಿದ್ದಾರೆ.

ಬಾಂಬ್‌ ಪತ್ತೆ ಮತ್ತು ಬಾಂಬ್‌ ನಿಷ್ಕ್ರಿಯ ದಳದವರು ಬ್ಯಾಗ್‌ನಲ್ಲಿದ್ದ ವಸ್ತು ಕಚ್ಚಾ ರೀತಿಯ ಸ್ಫೋಟಕ ಇದ್ದಿರಬಹುದು ಎಂಬುದಾಗಿ ಅನು ಭವದಿಂದ ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಎಲ್ಲ ಆಯಾಮಗಳಿಂದ ಪರಿಶೀಲಿಸುತ್ತಿದ್ದೇವೆ. ಆದಷ್ಟು ಶೀಘ್ರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ಭರವಸೆ ಇದೆ ಎಂದು ವಿವರಿಸಿದ್ದಾರೆ.


Spread the love

Exit mobile version