ವಿರೋಧದ ಮಧ್ಯೆಯೂ ಪ್ರಶಸ್ತಿ ಸ್ವೀಕರಿಸಲು ಉಡುಪಿಗೆ ಆಗಮಿಸಿದ ಪ್ರಕಾಶ್ ರೈ; ಅದ್ದೂರಿ ಸ್ವಾಗತ
ಉಡುಪಿ: ಸಾಕಷ್ಟು ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ ಬೆದರಿಕೆಯ ನಡುವೆಯೂ ಬಹು ಭಾಷಾ ನಟ ಪ್ರಕಾಶ್ ರೈ ಅವರು ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಮಂಗಳವಾರ ಉಡುಪಿಗೆ ಆಗಮಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿಗೆ ರಸ್ತೆಮಾರ್ಗವಾಗಿ ಆಗಮಿಸಿದ ಪ್ರಕಾಶ್ ರೈ ಅವರಿಗೆ ಪಡುಬಿದ್ರೆಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಯುವಕಾಂಗ್ರೆಸ್, ದಲಿತ ಸಂಘಟನೆಗಳು ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಹೂಹಾರ ಹಾಕಿ ಪ್ರಕಾಶ್ ರೈ ಅವರಿಗೆ ಸ್ವಾಗತಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಕಾಶ್ ರೈ ಅವರು ಪ್ರತಿಭಟನೆ ಮಾಡುವುದು ಅವರವರ ಹಕ್ಕು ಅದನ್ನು ಅವರು ಮಾಡುತ್ತಾರೆ. ಪ್ರತಿಭಟನೆಗಳಿಗೆಲ್ಲಾ ನಾನು ಹೆದರುವುದಿಲ್ಲ. ಶಿವರಾಮ ಕಾರಂತರು ನನಗೆ ಅಜ್ಜನ ಸಮಾನ ಹಾಗೂ ಆತ್ಮೀಯರಾಗಿದ್ದವರು. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದು ನನಗೆ ಹೆಮ್ಮೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳವಾರ ಅಪರಾಹ್ನ ಕೋಟದ ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ನಡೆಯಲಿದೆ.