ಉಡುಪಿ: ಬೆಳಪು ಗ್ರಾಮದಲ್ಲಿ ಎಜುಕೇಶನ್ ಕಾರಿಡಾರ್ ರೂಪಿಸಲು ಯೋಜನೆ ಸಿದ್ದಪಡಿಸಿದ್ದು, ಪದವಿಪೂರ್ವ ಕಾಲೇಜಿಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದ್ದು ಶೀಘ್ರ ಮಂಜೂರಲಾಗಲಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಶುಕ್ರವಾರ ಬೆಳಪುವಿನಲ್ಲಿ 143 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಂಗಳೂರು ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ವಿಜ್ಞಾನ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೂ ಸರಕಾರಕ್ಕೆ ಮನವಿ ಮಾಡಲಾಗಿದೆ. ಈ ಮೂಲಕ ಬೆಳಪು ಕೆ.ಜಿ.ಯಿಂದ ಪಿ.ಜಿ. ವರೆಗಿನ ಶಿಕ್ಷಣ ದೊರಕುವ ರಾಷ್ಟ್ರದ ಏಕೈಕ ನಗರವಾಗಿ ರೂಪುಗೊಳ್ಳಲಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ದೂರದೃಷ್ಟಿ ಅಗತ್ಯವಾಗಿದ್ದು, ಪಂಚಾಯತ್ಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮನಗಂಡು ಕಾಪು ಪುರಸಭೆ ರಚನೆ ಮಾಡಲಾಗಿದೆ. ಕಾಪು ಕ್ಷೇತ್ರಕ್ಕೆ ಅಗತ್ಯ ಇರುವ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಚಿಂತಿಸಿದ್ದು, ಇದರಿಂದ ಮುಂದಕ್ಕೆ ತಾಲೂಕು ರಚನೆ ಬೇಡಿಕೆಗೂ ಅನುಕೂಲವಾಗಲಿದೆ ಎಂದರು.
ವಿರೋಧ ಪಕ್ಷದ ಸ್ನೇಹಿತರು ಸೊರಕೆ ಕಾಪುವಿಗೆ ಮಾತ್ರ ಸೀಮಿತರಾಗಿದ್ದಾರೆ. ಅವರಿಂದ ಯಾವ ಕೆಲಸಗಳೂ ನಡೆಯುತ್ತಿಲ್ಲ. ಕೇವಲ ಬೊಗಳೆ ಬಿಡುವುದೇ ಅವರ ಕೆಲಸ ಎಂದೆಲ್ಲ ಅಪಪ್ರಚಾರದ ಮೂಲಕ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಮಾಡುವ ಕಾರ್ಯಕ್ರಮಗಳಿಗೆ ನಿಮ್ಮ ಸಹಕಾರವೂ ಅಗತ್ಯವಿದ್ದು, ಎಲ್ಲವನ್ನೂ ಟೀಕಿಸುವ ಬದಲು ಅಭಿವೃದ್ಧಿ ಕಾರ್ಯದ ಬಗ್ಗೆ ಆಲೋಚಿಸಿ ಎಂದು ಹೇಳಿದರು.
ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು. ವೇ| ಮೂ| ಬೆಟ್ಟಿಗೆ ವೆಂಕಟರಾಜ ತಂತ್ರಿ ಭೂಮಿ ಪೂಜಾ ಸಂಬಂಧಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಭಟ್, ತಾ.ಪಂ. ಸದಸ್ಯ ಯು.ಸಿ. ಶೇಖಬ್ಬ ಉಚ್ಚಿಲ, ಮಾಜಿ ತಾ.ಪಂ. ಸದಸ್ಯ ಎ.ಕೆ. ಸುಲೈಮಾನ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಪ್ಪು ಸೇರಿಗಾರ್, ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಗುತ್ತಿಗೆದಾರ ಸುರೇಶ್ ಶೆಟ್ಟಿ ಅಯೋಧ್ಯಾ, ಕೆಎಂಎಫ್ನ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ದೇವರಾಜ್ ರಾವ್ ನಡಿಮನೆ, ದೀಪಕ್ ಕುಮಾರ್ ಎರ್ಮಾಳ್, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.