ವಿಳಂಬವಿಲ್ಲದೆ ಕಡತ ವಿಲೆಯಲ್ಲಿ ಉಡುಪಿ ಮಾದರಿ ; ಜಿಲ್ಲಾಧಿಕಾರಿ ಡಾ ವಿಶಾಲ್

Spread the love

ಉಡುಪಿ: ಜನಸಾಮಾನ್ಯರ ಕಡತಗಳನ್ನು ವಿಳಂಬವಿಲ್ಲದೆ ವಿಲೆ ಮಾಡುವಲ್ಲಿ ಉಡುಪಿ ಜಿಲ್ಲಾಡಳಿತ ಪ್ರಥಮ ಸ್ಥಾನದಲ್ಲಿದ್ದು ಪ್ರತಿಶತ 300 ರಷ್ಟು ಕಡತ ಹೆಚ್ಚುವರಿ ವಿಲೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಹೇಳಿದರು.

dc-press-meet-udupi20160416

ಅವರಿಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕಂದಾಯ ಇಲಾಖೆ ಜನಪರವಾಗಿ ವಿಳಂಬ ಮಾಡದೆ ಸೇವೆ ನೀಡುತ್ತಿದ್ದು, ಸಮಯ ಮಿತಿಯೊಳಗೆ ಸೇವೆ ಒದಗಿಸುತ್ತಿದೆ ಎಂದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ 9,451 ಕಡತ ವಿಲೆ ಮಾಡಲಾಗಿದೆ. ಭೂಪರಿವರ್ತನೆ ಹಾಗೂ ಶಾಸಕ, ಸಂಸದರ ಅನುದಾನಗಳೊಂದಿಗೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದರು.
ಜಿಲ್ಲಾಧಿಕಾರಿಗಳು ಅರೆನ್ಯಾಯಿಕ ದಂಡಾಧಿಕಾರಿಗಳಾಗಿದ್ದು, ಒಂದು ವರ್ಷದ ಅವಧಿಯಲ್ಲಿ 1855 ಪ್ರಕರಣ ವಿಲೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪಡೆದುಕೊಂಡ ರೈತರಿಗೆ ಅತಿ ಹೆಚ್ಚಿನ ಪರಿಹಾರ ನೀಡಲಾಗಿದೆ. ಜೊತೆಗೆ ಕಂದಾಯ ದಾಖಲೆಗೆ ಸಂಬಂಧಿಸಿದ ಪ್ರಕರಣ ಇತ್ಯರ್ಥ ಪಡಿಸಿ, ರೈತರಿಗೆ ಜನಸಾಮಾನ್ಯರಿಗೆ ನ್ಯಾಯ ಒದಗಿಸಲಾಗುತ್ತಿದೆ.
ಸಕಾಲ ಯೋಜನೆಯಡಿ ನಿರಂತರವಾಗಿ ಯಾವುದೇ ವಿಳಂಬವಿಲ್ಲದೆ ಸೇವೆ ನೀಡುವಲ್ಲಿ ಉಡುಪಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಭೂಮಿ ಯೋಜನೆಯಡಿ ಅತಿ ಶೀಘ್ರವಾಗಿ ಖಾತಾ ಬದಲಾವಣೆ ಪ್ರಕರಣ ವಿಲೆಯಲ್ಲೂ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದೆ.
ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ನೀಡುತ್ತಿರುವ ಸೇವೆಗಳಲ್ಲೂ ಉಡುಪಿಗೆ ರಾಜ್ಯದಲ್ಲಿ ಪ್ರಥಮ ರ್ಯಾಂಕ್. ಈ ಕೇಂದ್ರಗಳಲ್ಲಿ ಸಾಮಾಜಿಕ ಸುರಕ್ಷೆ ಸೇರಿದಂತೆ ಒಟ್ಟ 37 ಸೇವೆಗಳು ಲಭ್ಯವಿರುತ್ತದೆ.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ 121 ಎಕರೆ ಅವಶ್ಯ ಜಮೀನು ಮಂಜೂರು ಮಾಡಲಾಗಿದೆ. ಜಿಲ್ಲೆಯ ವಿವಿಧ ಸಾರ್ವಜನಿಕ ಉದ್ದೇಶಗಳಿಗೆ 307 ಎಕರೆ ಜಮೀನು ಕಾಯ್ದಿರಿಸಲಾಗಿದೆ.
ಪ್ರಾಕೃತಿಕ ವಿಕೋಪದಡಿ ಅರ್ಹರಿಗೆ ಸೂಕ್ತ ಪರಿಹಾರ ಒದಗಿಸಲಾಗಿದೆ. ಜಿಲ್ಲೆ ಪ್ರಸಕ್ತ ಎದುರಿಸುತ್ತಿರುವ ಮರಳು ಸಮಸ್ಯೆಗೆ ಶೀಘ್ರ ಪರಿಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ .ಕೆ ಉಪಸ್ಥಿತರಿದ್ದರು.


Spread the love