ವಿವಿ ಪಠ್ಯ ಪುಸ್ತಕದಲ್ಲಿ ಸೈನಿಕರ ಅವಹೇಳನ ಎಬಿವಿಪಿ ಪ್ರತಿಭಟನೆ
ಮಂಗಳೂರು: ಮಂಗಳೂರು ವಿವಿ ಪ್ರಥಮ ವರ್ಷದ ತರಗತಿಗೆ ನಿಗದಿಪಡಿಸಿರುವ ‘ಪದಚಿತ್ತಾರ’ ಪಠ್ಯ ಪುಸ್ತಕದಲ್ಲಿ ಡಾ|| ಬರಗೂರು ರಾಮಚಂದ್ರಪ್ಪನವರು ಬರೆದ ‘ಯುದ್ಧ ಒಂದು ಉಧ್ಯಮ’ ಎಂಬ ಲೇಖನವು ಸೈನಿಕರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದು, ಇಂತಹ ಪಠ್ಯವನ್ನು ಪ್ರಕಟಿಸುವ ಮೂಲಕ ವಿಶ್ವವಿದ್ಯಾಲಯ ದೇಶದ್ರೋಹವನ್ನು ಎಸಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಿಭಟನಕಾರರು ಯುದ್ಧದ ಕುರಿತು ಹಾಗು ಅದರ ಭೀಕರತೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ನಮ್ಮ ದೇಶದ ಯೋಧರನ್ನು ಅವಮಾನಿಸಬೇಕಾಗಿಲ್ಲ. ಸೈನಿಕರು ದೇಶದ ಗಡಿಯನ್ನು ಕಾಯುವ ಸಂದರ್ಭದಲ್ಲಿ ಪ್ರಾಣವನ್ನೇ ಒತ್ತೆಯಾಗಿಡುತ್ತಾರೆ. ಆದರೆ ಇಂತಹ ಸೈನಿಕರು ಗಡಿ ಭಾಗದಲ್ಲಿ ಅತ್ಯಾಚಾರ ನಡೆಸುತ್ತಾರೆ ಎನ್ನುವುದು ಸೈನಿಕರಿಗೆ ಎಸಗಿದ ಅಪಚಾರವಾಗಿದೆ. ಸೈನಿಕರು ಹಾಗು ಅವರ ಕುಟುಂಬದ ಸದಸ್ಯರ ತ್ಯಾಗದಿಂದ ಇಂದು ದೇಶ ಉಳಿದಿದೆ. ಆದರೆ ಅಮೃತಮತಿಯ ಉದಾಹರಣೆಯನ್ನು ನೀಡುತ್ತಾ ಸೈನಿಕರ ಮನೆಯವರು (ಮಡದಿ) ತಪ್ಪು ದಾರಿಯನ್ನು ಹಿಡಿಯುತ್ತಾರೆ ಎಂಬಂತೆ ಬಿಂಬಿಸಿರುವುದು ಅಕ್ಷಮ್ಯ ಅಪರಾಧವಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಬೇಜವಬ್ದಾರಿಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶ ಕಯುವ ಸೈನಿಕರು ಅತ್ಯಾಚಾರಿಗಳು ಎಂಬ ಭಾವನೆ ಮೂಡಿದರೆ ಯಾರು ಹೊಣೆ? ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ವಿಚಾರಗಳನ್ನು ಮೂಡಿಸಿ ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕೇ ಹೊರತು ತಪ್ಪು ದಾರಿಗೆ ಎಳೆಯಬಾರದು. ಈ ಪಠ್ಯ ಪುಸ್ತಕವನ್ನು ವಿಶ್ವವಿದ್ಯಾಲಯ ಪ್ರಕಟಿಸಿ ವಿದ್ಯಾರ್ಥಿಗಳ ದಾರಿ ತಪ್ಪಿಸಿದೆ.
ವಿಶ್ವವಿದ್ಯಾಲಯ ಈ ಕೂಡಲೇ ನಿಗದಿಪಡಿಸಿದ ಪಠ್ಯ ಪುಸ್ತಕದಿಂದ ಸಂಬಂಧ ಪಟ್ಟ ಲೇಖನವನ್ನು ತಕ್ಷಣಕ್ಕೆ ಹಿಂಪಡಿಯಬೇಕು. ಈ ಲೇಖನವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿದ ಸಂಪಾದಕ ಮಂಡಳಿಯ ಸದಸ್ಯರನ್ನು ಕೂಡಲೇ ಪಠ್ಯಪುಸ್ತಕ ಸಂಪಾದಕ ಮಂಡಳಿಯಿಂದ ಕೈ ಬಿಡಬೇಕು. ಪಠ್ಯಪುಸ್ತಕ ರಚನೆಯ ಕನಿಷ್ಠ ನಿಯಮಾವಳಿಗಳನ್ನು ಪಾಲಿಸದ ಸಂಪಾದಕ ಮಂಡಳಿ ಪ್ರಕಟಿಸಿರುವ ಇತರ ಪಠ್ಯ ಪುಸ್ತಕಗಳ ಬಗ್ಗೆಯೂ ಪರಿಶೀಲಿಸಬೇಕಾದ ಅಗತ್ಯವಿದೆ. ಲೇಖಕರ ಅನುಮತಿ ಪಡೆಯದೇ ಲೇಖನವನ್ನು ಪ್ರಕಟಿಸಿರುವುದು ವಿಸ್ವವಿದ್ಯಾನಿಲಯ ಮಾಡಿದ ಅಪರಾಧವಾಗಿದೆ.
ವಿ.ವಿಯ ಕುಲಾಧಿಪತಿಗಳೂ ಆಗಿರುವ ರಾಜ್ಯದ ಘನತೆವೆತ್ತ ರಾಜ್ಯಪಾಲರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಮೇಲೆ ಶಿಸ್ತಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಅ.ಭಾ.ವಿ.ಪ ಆಗ್ರಹಿಸಿತು.
ನಗರದ ಲಾಲ್‍ಭಾಗ್ ವೃತ್ತದಲ್ಲಿ ನಡೆದ ಪ್ರತಿಭಟನೆಯ ನೇತೃತ್ವವವನ್ನು ಶೀತಲ್‍ಕುಮಾರ್, ರಾಜೇಂದ್ರ, ಕು|| ವಿದ್ಯಾ. ಮೃನಾಲ್ ಶೆಟ್ಟಿ, ಶರುಲ್ ವಾಮಂಜೂರು, ಶಿವರಾಜ್, ನಿತೇಶ್, ಪಲ್ಲವಿ, ಸುಷ್ಮ, ಐಶ್ವರ್ಯ ಮೊದಲಾದವರು ವಹಿಸಿಕೊಂಡಿದ್ದರು. ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.