ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯ ಬಂಧನ
ಉಡುಪಿ: 2021ರ ವರ್ಷ ಜು. 12 ರಂದು ರಾಜ್ಯವನ್ನೇ ಬೆಚ್ಚಿಬಿಳಿಸಿದ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಮ್ರಗೋಡುವಿನಲ್ಲಿರುವ ಮಿಲನ ರೆಸಿಡೆನ್ಸಿಯಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮೂರು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಧರ್ಮೇಂದ್ರ ಕುಮಾರ್ ಸುಹಾನಿ ಎಂದು ಗುರುತಿಸಲಾಗಿದೆ.
ಸದ್ರಿ ಪ್ರಕರಣದಲ್ಲಿ ಆರೋಪಿತರಾದ ಆಕೆಯ ಗಂಡ ರಾಮಕೃಷ್ಣ, ಸ್ವಾಮಿನಾಥನ್ ನಿಷಾದ್, ರೋಹಿತ್ ರಾಣಾ ಪ್ರತಾಪ್ ಇವರುಗಳನ್ನು ಈಗಾಗಲೆ ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ವಿಶಾಲ ಅವರ ಗಂಡ ರಾಮಕೃಷ್ಣ ಪ್ರಮುಖ ಆರೋಪಿತನಾಗಿದ್ದು ಈತನಿಗೂ ಹಾಗೂ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್ನಿಗೂ ಪರಿಚಯ ಮಾಡಿಸಿ ವಿಶಾಲ ರವರ ಕೊಲೆಗೆ ಸಹಕರಿಸಿದ ಇನ್ನೂರ್ವ ಆರೋಪಿಯಾದ ಧರ್ಮೇಂದ್ರ ಕುಮಾರ್ ಸುಹಾನಿ ಈತನು ಪ್ರಕರಣ ದಾಖಲಾದ ವಿಚಾರ ತಿಳಿದು, 3 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದವನನ್ನು ಬ್ರಹ್ಮಾವರ ಠಾಣಾ ಪಿಎಸ್ಐ ಮಧು ಬಿ. ಇ ಹಾಗೂ ಠಾಣಾ ಸಿಬ್ಬಂದಿಗಳಾದ ಶಾಂತರಾಜ್ ಎಎಸ್ಐ, ಸುರೇಶ ಬಾಬುರವರ ತಂಡವು ಫೆಬ್ರವರಿ 2 ರಂದು ಲಕ್ನೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿರುತ್ತದೆ.
ಘಟನೆಯ ಹಿನ್ನಲೆ: ವಿದೇಶದಲ್ಲಿದ್ದ ವಿಶಾಲ ಗಾಣಿಗ 2021 ರ ಜು.2ರಂದು ತನ್ನ ಪುತ್ರಿಯೊಂದಿಗೆ ಊರಿಗೆ ಬಂದಿದ್ದು, ಉಪ್ಪಿನ ಕೋಟೆಯ ಫ್ಲ್ಯಾಟ್ನಲ್ಲಿ ವಾಸವಾಗಿದ್ದರು. ಜುಲೈ 7 ರಂದು ರಾಮಕೃಷ್ಣರ ಆಸ್ತಿಗೆಸಂಬಂಧಿಸಿದ ಪಾಲುಪಟ್ಟಿ ನಡೆದಿದ್ದು, ಜುಲೈ 12ರಂದು ವಿಶಾಲ ಗಾಣಿಗ ತನ್ನ ತಂದೆ, ತಾಯಿ ಹಾಗೂ ಪುತ್ರನೊಂದಿಗೆ ಆಟೋ ರಿಕ್ಷಾದಲ್ಲಿ ತಾಯಿ ಮನೆ ಗುಜ್ಜಾಡಿಗೆ ಹೋಗಿದ್ದರು.
ಇದಾದ ಬಳಿಕ ವಿಶಾಲ ಗಾಣಿಗ ಆಟೋರಿಕ್ಷಾದಲ್ಲಿ ಮತ್ತೆ ಫ್ಲ್ಯಾಟ್ಗೆ ಬಂದಿದ್ದು, ಈ ವೇಳೆ ಸುಪಾರಿ ಕಿಲ್ಲರ್ಗಳು ವಿಶಾಲ ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇದು ವ್ಯವಸ್ಥಿತ ಕೊಲೆಯಾಗಬಾರದೆಂಬ ಉದ್ದೇಶಕ್ಕೆ ಆಕೆಯ ಮೈ ಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲ ಪ್ರಕರಣ ದಾಖಲಾಗಿತ್ತು.