ವಿಶ್ವಕರ್ಮ ಸಮುದಾಯಕ್ಕೆ ನ್ಯಾಯ ಒದಗಿಸಿದವರು ಡಾ| ವಿ.ಎಸ್.ಆಚಾರ್ಯ- ಕೆ.ಪಿ.ನಂಜುಂಡಿ
ಉಡುಪಿ: ಅಭಿವೃದ್ಧಿಯ ಹರಿಕಾರ ಡಾ| ವಿ.ಎಸ್.ಆಚಾರ್ಯರವರು ತನ್ನ ದೂರದರ್ಶಿತ್ವ ಮತ್ತು ಪ್ರಗತಿಪರ ಚಿಂತನೆಯೊಂದಿಗೆ ವಿಶ್ವಕರ್ಮ ಜಯಂತಿಗೆ ಸರಕಾರಿ ರಜೆಯನ್ನು ಘೋಷಣೆ ಮಾಡುವ ಮೂಲಕ ಹಿಂದುಳಿದ ವಿಶ್ವಕರ್ಮ ಸಮುದಾಯಕ್ಕೆ ಗೌರವವನ್ನು ತಂದುಕೊಟ್ಟವರು. ಕಳೆದ 16 ವರ್ಷಗಳ ಕಾಲ ಸ್ವಾರ್ಥ ರಾಜಕಾರಣಕ್ಕೆ ನನ್ನನ್ನು ಬಳಸಿಕೊಂಡು ವಿಶ್ವಕರ್ಮ ಸಮುದಾಯಕ್ಕೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೆ ರಾಜ್ಯ ಕಾಂಗ್ರೆಸ್ ಪಕ್ಷ ದ್ರೋಹಎಸಗಿದೆ. ಅಹಿಂದ ಮಂತ್ರವನ್ನು ಜಪಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ವಿಶ್ವಕರ್ಮ ಸಮುದಾಯವೂ ಸೇರಿದಂತೆ ಸಮಸ್ತ ಹಿಂದುಳಿದ ವರ್ಗವನ್ನು ಕಡೆಗಣಿಸಿದೆ. ಇಂದು ಎಲ್ಲಾ ವರ್ಗಗಳ ಜನತೆಯ ಶ್ರೇಯೋಭಿವೃದ್ಧಿಯು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ “ಮಿಷನ್-150”ನ್ನು ಸಕಾರಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಕರೆ ನೀಡಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿಯಿಂದ ಗೌರವ ಸನ್ಮಾನವನ್ನು ಸ್ವೀಕರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಜಾಗತಿಕ ನಾಯಕ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಪ್ರಗತಿಪರ ಆಡಳಿತ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾರವರ ಪರಿಣಾಮಕಾರಿ ನೀತಿ ನಿರೂಪಣೆಯು ಪಕ್ಷಕ್ಕೆ ವರದಾನವಾಗಿದೆ. ಈ ಸದವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಪತಾಕೆಯನ್ನು ಹಾರಿಸುವ ಗುರುತರವಾದ ಹೊಣೆ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ನಾನು ಬದ್ಧನಾಗಿದ್ದೇನೆ. ಭ್ರಷ್ಟ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನ ವಿರೋಧಿ ನೀತಿ ಹಾಗೂ ಕೇಂದ್ರ ಸರಕಾರದ ಜನಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ನವ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡೋಣ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆಯವರು ಮಾತನಾಡಿ ವಿಶ್ವಕರ್ಮ ಸಮುದಾಯವು ಪರಂಪರಾನುಗತವಾಗಿ ಬಿಜೆಪಿ ಪರವಾಗಿದ್ದು, ಭ್ರಷ್ಟ ಕಾಂಗ್ರೆಸ್‍ನ ಒಡೆದು ಆಳುವ ನೀತಿಗೆ ಬೇಸತ್ತು ಇಂದು ಇಡೀ ಸಮುದಾಯ ಬಿಜೆಪಿಯೊಂದಿಗಿರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದರು. ಮಾಜಿ ಶಾಸಕ ಕೆ.ರಘುಪತಿ ಭಟ್, ಮಂಗಳೂರು ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಹಿಂ.ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೆಸರ ಶ್ರೀಧರ ಆಚಾರ್ಯ, ಕಟಪಾಡಿ ಆನೆಗುಂದಿ ಸಂಸ್ಥಾನದ ಪ್ರ.ಕಾರ್ಯದರ್ಶಿ ನಾಗರಾಜ್ ಆಚಾರ್ಯ, ಉಡುಪಿ ಕಾರ್ಪೆಂಟರ್ಸ್ ಯೂನಿಯನ್ ಅಧ್ಯಕ್ಷ ಶ್ರೀಧರ ಆಚಾರ್ಯ ಮೂಡುಬೆಟ್ಟು ಉಪಸ್ಥಿತರಿದ್ದರು.
ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಗರಾಧ್ಯಕ್ಷ ಪ್ರಭಾಕರ ಪೂಜಾರಿ ವಂದಿಸಿದರು.