ವಿಶ್ವದಲ್ಲಿಯೇ ಅತಿ ಎತ್ತರದ ಏಕಶಿಲಾ ಯೇಸು ಪ್ರತಿಮೆಗೆ ಡಿಕೆ ಶಿವಕುಮಾರ್ ಶಿಲಾನ್ಯಾಸ

Spread the love

ವಿಶ್ವದಲ್ಲಿಯೇ ಅತಿ ಎತ್ತರದ ಏಕಶಿಲಾ ಯೇಸು ಪ್ರತಿಮೆಗೆ ಡಿಕೆ ಶಿವಕುಮಾರ್ ಶಿಲಾನ್ಯಾಸ

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವದಲ್ಲಿಯೇ ಅತಿ ಎತ್ತರದ 114 ಅಡಿಯ ಏಕಶಿಲೆ ಯೇಸುಕ್ರಿಸ್ತರ ಪ್ರತಿಮೆ ನಿರ್ಮಾಣದ ಶಿಲಾನ್ಯಾಸವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕ್ರಿಸ್ಮಸ್ ಶುಭದಿನವಾದ ಬುಧವಾರ ನೆರವೇರಿಸಿ, ಪಕ್ಕದಲ್ಲಿಯೇ ಇರುವ ಪ್ರತಿಮೆ ಮಾದರಿಯನ್ನು (model statue) ವೀಕ್ಷಿಸಿದರು.

ಯೇಸುಕ್ರಿಸ್ತ ಪ್ರತಿಮೆ ನಿರ್ಮಾಣವಾಗುತ್ತಿರುವ ಕಪಾಲಿಬೆಟ್ಟದ ಹತ್ತು ಎಕರೆ ಜಾಗವನ್ನು ಡಿ.ಕೆ. ಶಿವಕುಮಾರ್ ತಮ್ಮ ಸ್ವಂತ ಹಣವನ್ನು ಕಟ್ಟಿ ಸರಕಾರದಿಂದ ಪಡೆದಿದ್ದು, ಪ್ರತಿಮೆ ನಿರ್ಮಾಣ ಟ್ರಸ್ಟ್ ನವರಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು.

114 ಅಡಿ ಎತ್ತರದ ಪ್ರತಿಮೆ ಪೈಕಿ 13 ಅಡಿ ಮೆಟ್ಟಿಲುಗಳು ಇದ್ದು, ಅದರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಯೇಸುಕ್ರಿಸ್ತರ ಪ್ರತಿಮೆ ಬಲಪಾದದ ಕಲ್ಲಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ನಿರ್ಮಾಣ ಕಾರ್ಯದ ಶಿಲಾನ್ಯಾಸ ನೆರನೇರಿಸಲಾಯಿತು.

ಹಾರೋಬೆಲೆ ಗ್ರಾಮದಲ್ಲಿ ಶೇಕಡಾ 99 ರಷ್ಟು ಮಂದಿ ಕ್ರೈಸ್ತ ಸಮುದಾಯದವರಿದ್ದು, ಈ ಪವಿತ್ರ ಕಾರ್ಯದ ಅನುಷ್ಠಾನಕ್ಕೆ ಕಾರಣೀಭೂತರಾದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರಿಗೆ ಕೃತಜ್ಞತೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಎಸ್. ರವಿ, ಟ್ರಸ್ಟಿನ ಚಿನ್ನರಾಜು ಮತ್ತಿತರರು ಉಪಸ್ಥಿತರಿದ್ದರು


Spread the love