ವಿಶ್ವವಿದ್ಯಾನಿಲಯ ಆವರಣದಲ್ಲಿ ದೇಶವಿರೋಧಿ ಭಾವನೆಗೆ ಪ್ರಚೋದನೆ : ಗಣೇಶ್ ಕಾರ್ಣಿಕ್ ಖಂಡನೆ
ಮಂಗಳೂರು: ಸಂವಿಧಾನ ನೀಡಿದ ವಾಕ್ ಸ್ವಾತಂತ್ರ್ಯದ ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೇಶವಿರೋಧಿ ಭಾವನೆಗಳನ್ನು ಪ್ರಚೋದಿಸುವ ಚಟುವಟಿಕೆಗಳು ವಿಶ್ವವಿದ್ಯಾನಿಲಯಗಳ ಆವರಣದಲ್ಲಿ ನಡೆಯುತ್ತಿರುವುದು ಅತ್ಯಂತ ಖೇದಕರ. ಹುತಾತ್ಮರಾದ ಮಾಜಿ ಯೋಧರ ಪುತ್ರಿಯೋರ್ವಳು ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆಗಳು ಮತ್ತೊಮ್ಮೆ ವಿಶ್ವವಿದ್ಯಾನಿಲಯಗಳ ಆವರಣದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಹಾಗೂ ವೈಚಾರಿಕ ಸ್ವಾತಂತ್ರ್ಯದ ನೆಪದಲ್ಲಿ ದುಷ್ಕøತ್ಯಗಳಿಗೆ ಎಡೆ ಮಾಡಿ ಕೊಡುತ್ತಿರುವುದು ಸಾಂವಿಧಾನಿಕ ಹಕ್ಕುಗಳಿಗೆ ಮಾಡಿದ ಅಪಚಾರ. ಎಡಪಂಥಿಯ ವಿಚಾರಧಾರೆಯಿಂದ ಪ್ರೇರಿತರಾಗಿ ಸಾಂವಿಧಾನಿಕ ಜವಾಬ್ದಾರಿಗಳನ್ನು ಅರಿತುಕೊಳ್ಳದೆ, ದೇಶದ ಗಡಿರಕ್ಷಣೆಗಾಗಿ ಅಹರ್ನಿಶಿ ದುಡಿಯುತ್ತಿರುವ ಸೈನಿಕರ ಬಲಿದಾನಕ್ಕೆ ಕಿಂಚಿತ್ತು ಗೌರವ ಸಲ್ಲಿಸದಿರುವ ಕೃತಘ್ನರು ವ್ಯವಸ್ಥಿತವಾಗಿ ನಡೆಸುವ ಷಡ್ಯಂತ್ರ ಇದಾಗಿದೆ.
ಜವಾಬ್ದಾರಿಯುತ ನಾಗರಿಕರಾಗಿ ಹಕ್ಕುಗಳ ಬಗ್ಗೆ ಧ್ವನಿ ಏರಿಸುತ್ತಾ, ಎಲ್ಲೋ ಒಂದೆಡೆ ನಮ್ಮ ನಾಗರಿಕ ಕರ್ತವ್ಯಗಳನ್ನು ಮರೆತಿರುವ ಒಂದು ವರ್ಗದಲ್ಲಿ ಅಸಹಿಷ್ಣುತೆಯ ಛಾಯೆ ಕಂಡು ಬರುತ್ತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತ ಸರಕಾರವನ್ನು ಧಿಕ್ಕರಿಸುವುದು, ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ನಾಗರಿಕ ಜವಾಬ್ದಾರಿಯನ್ನು ಮರೆಯುವುದು, ವಿಶ್ವವಿದ್ಯಾನಿಲಯದ ಅವರಣವನ್ನು ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ದುರಪಯೋಗ ಮಾಡುವುದು, ಸಂವಿಧಾನಿಕ ಸಂಸ್ಥೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿದವರ ಪರ ಘೋಷಣೆ ಕೂಗುವುದು, ದೇಶದ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸುವುದು ಹಾಗೂ ಹುತಾತ್ಮ ಯೋಧನ ಪುತ್ರಿಯನ್ನು ಈ ಷಡ್ಯಂತ್ರದಲ್ಲಿ ಉಪಯೋಗಿಸಿಕೊಳ್ಳುವುದು ಈ ವಿಚಾರವಾದಿಗಳ ಹೊಸ ತಂತ್ರವಾಗಿದ್ದು, ದೇಶ ಎಚ್ಚೆತ್ತುಕೊಂಡು ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ರೀತಿಯ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಚಟುವಟಿಗಳನ್ನು ಹತ್ತಿಕ್ಕುವ ಕಟ್ಟು ನಿಟ್ಟಿನ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಬೇಕಾಗಿದೆ. ದೇಶದ ನಾಗರೀಕರಾಗಿ ಕರ್ತವ್ಯಗಳನ್ನು ನಿರ್ವಹಿಸಿದಾಗಲೇ ನಮ್ಮ ಹಕ್ಕುಗಳು ಲಭ್ಯವಾಗುತ್ತವೆ ಎನ್ನುವ ಸಾಮನ್ಯ ಅರಿವು ನಮ್ಮೆಲ್ಲರಲ್ಲೂ ಇರುವ ಅವಶ್ಯಕತೆ ಇದೆ. ಸ್ವತಂತ್ರ ಭಾರತದಲ್ಲಿ “ಪ್ರತ್ಯೇಕತೆ”ಯ ಮತ್ತು “ಆಜಾದಿ”ಯ ಹೆಸರಿನಲ್ಲಿ ನಡೆಯುವ ರಾಷ್ಟ್ರ ವಿರೋಧಿ ಚಟುವಟಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಘೋರ ವಿಡಂಬನೆ.
ದಾರಿ ತಪ್ಪಿದ ಈ ಒಂದು ವರ್ಗವನ್ನು ರಾಷ್ಟ್ರದ ಮುಖ್ಯವಾಹಿನಿಗೆ ಸೇರಿಸುವ ಎಲ್ಲಾ ಪ್ರಾಮಾಣಿಕ ಪ್ರಯತ್ನದೊಂದಿಗೆ ದೇಶದ ಕಾನೂನನ್ನು ಕೈಗೆತ್ತಿಕೊಳ್ಳುವ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸುವ ಹಾಗೂ ಪ್ರತ್ಯೇಕತೆಯನ್ನು ಪ್ರೋತ್ಸಾಹಿಸುವ ಎಲ್ಲಾ ಪ್ರಯತ್ನಗಳನ್ನು ಹತ್ತಿಕ್ಕಿ, ದೇಶ ಮುನ್ನೆಡೆಸಬೇಕಾದ ಅನಿವಾರ್ಯತೆಯ ಕಾಲಘಟ್ಟದಲ್ಲಿ ಈ ರೀತಿಯ ಷಡ್ಯಂತ್ರಗಳನ್ನು ಸಾರ್ವಜನಿಕವಾಗಿ ಖಂಡಿಸಬೇಕಾದ ಅಗತ್ಯವಿದೆ.
“ಯುದ್ಧದಲ್ಲಿ ಸೈನಿಕರು ಹುತಾತ್ಮರಾಗುತ್ತಾರೆಯೇ ಹೊರತು ಯುದ್ಧ ಸೈನಿಕರನ್ನು ಕೊಲ್ಲುವುದಿಲ್ಲ. ಯುದ್ಧದ ಅನಿವಾರ್ಯತೆಗೆ ಕಾರಣವಾದ ಅರಾಷ್ಟ್ರೀಯ ಚಿಂತನೆ ಹಾಗೂ ದೇಶದ ಶಾಂತಿ ಸುವ್ಯವಸ್ಥೆಯನ್ನು ಕದಡುವ, ದೇಶದ ಅಖಂಡತೆಯನ್ನು ನಾಶಮಾಡುವ, ದೇಶದ ಅಂತರಂಗದಲ್ಲಿ ಪ್ರತ್ಯೇಕತೆಯನ್ನು ಪ್ರೋತ್ಸಾಹಿಸುವ, ದೇಶದ ಅರ್ಥಿಕತೆಯನ್ನು ದುರ್ಬಲಗೊಳಿಸುವ ಹಾಗು ಭಾರತ ದೇಶವನ್ನು ಸಾವಿರ ಗಾಯಗಳೊಂದಿಗೆ ನಾಶಗೊಳಿಸಬೇಕೆನ್ನುವ ನೆರೆ ರಾಷ್ಟ್ರ ಪಾಕಿಸ್ತಾನದ ದುರುದ್ದೇಶವೇ ನಮ್ಮ ದೇಶದ ಸೈನಿಕರ ಬಲಿದಾನಕ್ಕೆ ಕಾರಣ.”
ಹುತಾತ್ಮ ಯೋಧನ ಪುತ್ರಿ ಗುರ್ ಮೆಹರ್ ರವರ ವಾಕ್ ಸ್ವಾತಂತ್ರ್ಯವನ್ನು ಗೌರವಿಸುತ್ತಾ ಈ ದೇಶದ ಅಖಂಡತೆಗಾಗಿ, ಗಡಿ ರಕ್ಷಣೆಗಾಗಿ ಹಾಗೂ ಶಾಂತಿ ಸುವ್ಯವಸ್ಥೆಗಾಗಿ ಹುತಾತ್ಮರಾಗಿರುವ ಸೈನಿಕರನ್ನು ಹಾಗೂ ಅವರ ಕುಟುಂಬದವರನ್ನು ಶ್ರದ್ಧೆ ಹಾಗೂ ಗೌರವಗಳೊಂದಿಗೆ ಸ್ಮರಿಸುತ್ತಾ ಹುತಾತ್ಮ ಯೋಧರ ಬಲಿದಾನದೊಂದಿಗೆ ಚೆಲ್ಲಾಟವಾಡುವ ಈ ಪ್ರವೃತ್ತಿಯನ್ನು ತೀವ್ರವಾಗಿ ಖಂಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.