Home Mangalorean News Kannada News ವಿಶ್ವ ಕಂಡ ಮಹಾನ್ ಶಾಂತಿದೂತ ಗಾಂಧೀಜಿ; ವಿನಯ್ ಕುಮಾರ್ ಸೊರಕೆ

ವಿಶ್ವ ಕಂಡ ಮಹಾನ್ ಶಾಂತಿದೂತ ಗಾಂಧೀಜಿ; ವಿನಯ್ ಕುಮಾರ್ ಸೊರಕೆ

Spread the love

ವಿಶ್ವ ಕಂಡ ಮಹಾನ್ ಶಾಂತಿದೂತ ಗಾಂಧೀಜಿ; ವಿನಯ್ ಕುಮಾರ್ ಸೊರಕೆ

ಕಾಪು: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದು, ಸತ್ಯ, ಶಾಂತಿ ಮತ್ತು ಅಹಿಂಸೆಯನ್ನೇ ಪರಮ ಅಸ್ತ್ರವಾಗಿಸಿಕೊಂಡು ವಿವಿಧ ಜಾತಿ-ಧರ್ಮದ ಹಲವಾರು ದೇಶಭಕ್ತರನ್ನು ಒಗ್ಗೂಡಿಸಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟಿರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದುದು ಮಹಾತ್ಮಾ ಗಾಂಧೀಜಿ. ತನ್ನ ಜಾತ್ಯಾತೀತತೆ ಮತ್ತು ಅಹಿಂಸಾ ತತ್ವದ ಬಗ್ಗೆ ವಿಶ್ವಸಂಸ್ಥೆಯಲ್ಲಿ ತಾನು ಮಾಡಿದ್ದ ಭಾಷಣದಲ್ಲಿ ವಿಶ್ವಕ್ಕೆ ನೀಡಿದ ಶಾಂತಿಯ ಸಂದೇಶ ಎಂದಿಗೂ ಸಾರ್ವಕಾಲಿಕ ಹಾಗೂ ಅವರ ಜೀವನಾದರ್ಶಗಳು ಎಂದೆಂದಿಗೂ ಅನುಕರಣೀಯ. ಒಟ್ಟಾರೆ ಮಹಾತ್ಮ ಗಾಂಧೀಜಿಯವರು ವಿಶ್ವ ಕಂಡ ಮಹಾನ್ ಶಾಂತಿದೂತ ನೆಂದು ಇಡೀ ವಿಶ್ವವೇ ಕೊಂಡಾಡುತ್ತದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಹೇಳಿದರು.

ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 151 ನೇ ಜನ್ಮ ಜಯಂತಿ, ಹಾಗೂ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ಜಯಂತಿಯ ಪ್ರಯುಕ್ತ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ, ರಾಜೀವ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಬ್ಬರು ಮಹಾನ್ ನಾಯಕರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದಾಗ ಕಮರಿ ಹೋದಂತೆ ಭಾಸವಾಗುತ್ತಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಗಾಂಧೀಜಿಯವರ ಕನಸಿನ ಭಾರತದಲ್ಲಿ ಮಹಿಳೆಯರ ಮೇಲೆ ದಿನಾ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಹಿಂಸೆಯನ್ನು ಗಮನಿಸಿದಾಗ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಜನರಲ್ಲಿ ಭಯ, ಆತಂಕ, ಅಸುರಕ್ಷತೆಯ ಕರಿಛಾಯೆ ಆವರಿಸಿದಂತಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ರರುವ ಆಡಳಿತಾರೂಢ ಸರ್ಕಾರ ಭ್ರಷ್ಟಾಚಾರಿಗಳ ಮತ್ತು ಅತ್ಯಾಚಾರಿಗಳ ರಕ್ಷಣೆಯಲ್ಲಿ ತೊಡಗಿದ್ದು ಬಡಜನರ ಪಾಲಿಗೆ ನ್ಯಾಯವೆಂಬುದು ಮರೀಚಿಕೆಯಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಇಂತಹ ಭಂಡ, ಭ್ರಷ್ಟ, ಜನವೊರೋಧಿ ಸರ್ಕಾರದ ವಿರುದ್ಧ ಗಾಂಧೀಜಿಯವರ ತತ್ವಾದರ್ಶದಂತೆ ಹೋರಾಡಿ ಆರಾಜಕತೆಯನ್ನು ನಿರ್ಮೂಲಣ ಮಾಡಿ ಬಾಪೂಜಿಯವರ ರಾಮರಾಜ್ಯದ ಕನಸನ್ನು ನನಸಾಗಿಸಲು ನಾವೆಲ್ಲರೂ ಇಂದೇ ಪಣ ತೋಡೋಣ ಎಂದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನಚಂದ್ರ ಸುವರ್ಣ ಮಾತನಾಡಿ ಇಬ್ಬರು ಮಹಾನ್ ನಾಯಕರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಸಭೆಯಲ್ಲಿ ಕಾಪು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಾದಿಕ್, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ಎಸ್. ಶೆಟ್ಟಿ, ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿ ಅಖಿಲೇಶ್ ಕೋಟ್ಯಾನ್, ಉಡುಪಿ ಜಿಲ್ಲಾ ಎನ್.ಎಸ್.ಯು.ಐ ನ ನೂತನ ಅಧ್ಯಕ್ಷ ಸೌರಭ್ ಬಲ್ಲಾಳ್, ಶಾಂತಲತಾ ಶೆಟ್ಟಿ, ದೀಪಕ್ ಎರ್ಮಾಳ್, ಮಾಲಿನಿ, ಕೆ. ಎಚ್. ಉಸ್ಮಾನ್, ಆಶಾ ಅಂಚನ್ ಕಟಪಾಡಿ, ಅಶ್ವಿನಿ ನವೀನ್, ದಿವಾಕರ್ ಬಿ. ಶೆಟ್ಟಿ, ಹರೀಶ್ ನಾಯಕ್, ಕರುಣಾಕರ ಪೂಜಾರಿ, ಜಹೀರ್ ಅಹ್ಮದ್, ವಿಜಯ್ ಕಟಪಾಡಿ, ಅಶೋಕ್ ಮಣಿಪುರ,  ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

Exit mobile version