ವಿಶ್ವ ಕೊಂಕಣಿ ‘ಕ್ಷಮತಾ ಅಕಾಡೆಮಿ’ ಐದನೇ ಶಿಬಿರ ಸಮಾರೋಪ ಸಮಾರಂಭ
ವಿಶ್ವ ಕೊಂಕಣಿ ವಿದ್ಯಾರ್ಥಿವೇತನನಿಧಿ ವತಿಯಿಂದ ಇಂಜಿನಿಯರಿಂಗ ಮತ್ತು ಮೆಡಿಕಲ್ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಹಾಗೆಯೇ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ “ಕ್ಷಮತಾ ಅಕಾಡೆಮಿ” ಯೋಜನೆಯಡಿಯಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತದೆ. ಈ ಸಾಲಿನ “ಕ್ಷಮತಾ ಅಕಾಡೆಮಿ” ಐದನೇ ಶಿಬಿರದ ಸಮಾರೋಪ ಸಮಾರಂಭ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಅಜಿತ್ ಕಾಮತ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಉತ್ತಮ ನಡವಳಿಕೆ, ಸಂವಹನ ಮತ್ತು ನಿಶ್ಚಿತ ಗುರಿಗಳನ್ನು ಮುಂದಿಟ್ಟುಕೊಂಡು ಜೀವನದಲ್ಲಿ ಮುನ್ನಡೆಯುವಂತೆ ಉಪಯುಕ್ತವಾದ ಸಲಹೆಗಳನ್ನು ನೀಡಿದರು. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಹಾಗೂ ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠ ಸಂಯೋಜಕರಾದ ಡಾ. ಜಯವಂತ ನಾಯಕ ಮಾತನಾಡುತ್ತಾ ಹಲವು ಶತಮಾನಗಳಿಂದ ಕೊಂಕಣಿ ಬಾಷಿಕ ಸಮುದಾಯಗಳು, ಕಾಲಾನುಕಾಲಗಳಲ್ಲಿ ವಲಸಿಗರಾಗಿ ವಿವಿಧ ಪ್ರದೇಶಗಳಲ್ಲಿ ನೆಲೆಸಿ ಚಾರಿತ್ರಿಕ, ಸಾಮಾಜಿಕ, ರಾಜಕೀಯ ಕಾರಣಗಳಿಂದ ತಾವು ನೆಲೆಸಿದ ಪ್ರದೇಶಗಳ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಬದುಕು ಸಾಗಿಸಿದ್ದಾರೆ ಎಂದು ಹೇಳಿದರು. ವಿಶ್ವ ವಿದ್ಯಾನಿಲಯ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಪ್ರಾಧ್ಯಾಪಕರು ಡಾ. ಎಮ್.ಎಸ್. ಮುಸ್ತಾಕ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಕೊಂಕಣಿ ಭಾಷಿಕ ವಿದ್ಯಾರ್ಥಿಗಳ ಜನಸಂಖ್ಯೆಯ ಜೀನೋಮಿಕ್ ವಿಶ್ಲೇಷಣೆಯಲ್ಲಿ (ಡಿ. ಎನ್. ಎ.) ಭಾಗಿದಾರರಾದವರಿಗೆ ಪ್ರಮಾಣ ಪತ್ರಗಳನ್ನು ಇವರು ವಿತರಣೆ ಮಾಡಿದರು.
‘ಕ್ಷಮತಾ ಅಕಾಡೆಮಿ’ ಸಂಚಾಲಕ ಸಿ. ಎ. ಶ್ರೀ ಗಿರಿಧರ ಕಾಮತ, ನ್ಯಾಯವಾದಿ ಅಮೃತ ಕಿಣಿ, ವಿಶ್ವ ಕೊಂಕಣಿ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀ ಎಂ. ಆರ್. ಕಾಮತ್, ಉದ್ಯಮಿ ಶ್ರೀ ಬಸ್ತಿ ಮಾಧವ ಶೆಣೈ, ವಿಶ್ವ ಕೊಂಕಣಿ ಕೇಂದ್ರ ಭಾಷಾ ಸಂಸ್ಥಾನ ಸಹಾಯಕ ನಿರ್ದೇಶಕ ಶ್ರೀ ಗುರುದತ್ತ ಬಂಟ್ವಾಳಕಾರ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಶಿಬಿರದಲ್ಲಿ ಪಡೆದ ಅನುಭವಗಳನ್ನು ಹಾಗೂ ನಡೆದ ವಿವಿಧ ಚಟುವಟಿಕೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಮತ್ತು ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.