ಉಡುಪಿ : ಮರಗಿಡಗಳ ಸಂರಕ್ಷಣೆ ಇಂದಿನ ಅಗತ್ಯ ವಾಗಿದ್ದು, ಪುರಾಣದಲ್ಲೂ ಇದಕ್ಕೆ ಆದ್ಯತೆ ನೀಡಲಾಗಿದೆ. ಸಂತರ ನೇತೃತ್ವ, ಸರಕಾರದ ಸಹಕಾರ, ಸಮಾಜದ ಬೆಂಬಲ ದಿಂದ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೇಜಾವರ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ವೃಕ್ಷರಕ್ಷ- ವಿಶ್ವರಕ್ಷ ಯೋಜನೆಯ ಅಂಗವಾಗಿ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ನಾಗರಿಕ ಜಾಗೃತಿ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಂತರಂಗ ನಿರ್ಮಲ ಹಾಗೂ ಬಹಿರಂಗ ಪರಿಶುದ್ದವಾದರೆ ವ್ಯಕ್ತಿತ್ವ ಪೂರ್ಣ ವಿಕಸನವಾಗುತ್ತದೆ. ಅಂತರಂಗದಲ್ಲಿರುವ ಕೆಟ್ಟ ಪ್ರವೃತ್ತಿ ಹಾಗೂ ವ್ಯಸನಗಳನ್ನು ದೂರ ಮಾಡಿದರೆ, ಬಹಿರಂಗದಲ್ಲಿ ಮರಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಶುದ್ಧ ಮಾಡುವ ಕಾರ್ಯ ಆಗಬೇಕು ಎಂದು ಅವರು ತಿಳಿಸಿದರು. ಪೇಜಾವರ ಕಿರಿಯ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಈ ಜಗತ್ತಿನಲ್ಲಿ ಪ್ರತಿ ಯೊಬ್ಬರಿಗೂ ಬದುಕುವ ಹಕ್ಕು ಸಿಗಬೇಕಾದರೆ ವೃಕ್ಷಗಳನ್ನು ಬೆಳೆಸಬೇಕಾಗಿದೆ. ತಾಪಮಾನ ದಿನದಿಂದ ದಿನ ಏರಿಕೆ ಯಾಗುತ್ತಿದ್ದು, ಇದರಿಂದ ಕುಡಿಯುವ ನೀರಿನ ಹಾಗೂ ಶುದ್ಧ ಗಾಳಿಯ ಕೊರತೆ ಉಂಟಾಗುತ್ತಿದೆ. ಪರಿಸರ ರಕ್ಷಣೆಯಿಂದ ಮಾತ್ರ ಇದಕ್ಕೆ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. “ಹಸಿರು ನಮ್ಮ ಉಸಿರು’, “ಮರ ಜೀವನದ ವರ’, “ಮರಗಳನ್ನು ಬೆಳೆಸಿರಿ ಮರಣವನ್ನು ಅಳಿಸಿರಿ’ ಎಂಬ ಘೋಷಣೆಗಳನ್ನು ಪೇಜಾವರ ಸ್ವಾಮೀಜಿ ಈ ಸಂದರ್ಭ ಘೋಷಿಸಿದರು.
ಪರಿಸರ ಪ್ರೇಮಿಗಳಾದ ಸಾಲುಮರದ ತಿಮ್ಮಕ ಹಾಗೂ ಚನ್ನರಾಯಪಟ್ಟಣದ ಅಶೋಕ್‌ರನ್ನು ಸನ್ಮಾನಿಸಲಾಯಿತು. ಪ್ರೇಕ್ಷಕರಿಗೆ ಗಿಡಗಳನ್ನು ವಿತರಿಸ ಲಾಯಿತು.
ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿದರು. ಬನ್ನಂಜೆ ರಾಘವೇಂದ್ರ ತೀರ್ಥ ಸ್ವಾಮೀಜಿ, ಅಪ್ಪಿಕೋ ಚಳವಳಿಯ ಕಾರ್ಯಕರ್ತ ಪಾಂಡುರಂಗ ಹೆಗಡೆ ಶಿರಸಿ, ಪರಿಸರ ಅಂಕಣಕಾರ ಡಾ.ಸತ್ಯನಾರಾಯಣ ಭಟ್, ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಲ್.ಮಂಜುನಾಥ್ ಉಪ ಸ್ಥಿತರಿದ್ದರು.